Skip to main content

ಶುಕ್ರಾಚಾರ್ಯ - ಬಾಗಲೋಡಿ ದೇವರಾಯ

ಈ ಕಥೆಯು, ಪ್ರಕಸಂ ಅಭಿನಯಿಸಿದ ಕಥಾಸಂಗಮ ನಾಟಕಕ್ಕಾಗಿ ಆಯ್ದುಕೊಂಡಿದ್ದು. ನಾಟಕದ ಪೂರ್ಣ ವಿವರಕ್ಕಾಗಿ - www.prakasamtrust.org/ks ನೋಡಿ.

ಶುಕ್ರಾಚಾರ್ಯ

*ಬಾಗಲೋಡಿ ದೇವರಾಯ 

ಅಶ್ವತ್ಥಾಮನ ಜೀವನ ಬಹು ವಿಚಿತ್ರವಾದುದು. ಸಣ್ಣಪ್ರಾಯದಲ್ಲೇ, ಹುಡುಗನಿದ್ದಾಗಲೇ ಕಾಂಚಿಗೆ ಹೋಗಿ ಸಂಸ್ಕೃತ ಮತ್ತು ಶಾಸ್ತ್ರಾಭ್ಯಾಸ ಮಾಡಬೇಕೆಂದು ಹಠತೊಟ್ಟ, ಅವನ ಮಾತಾಪಿತೃಗಳಿಗೆ ಇವನೊಬ್ಬನೇ ಸಂತಾನವಾಗಿದ್ದ ಕಾರಣ ಇದು ಸರ್ವಥಾ ಇಷ್ಟವಿರಲಿಲ್ಲ. ಅದೂ ಅಲ್ಲದೆ, ಅವರು ಮರ್ಯಾದೆಯ ಮನೆತನದವರಾದರೂ ಐಶ್ವರ್ಯವಂತರಾಗಿರಲಿಲ್ಲ. ಬಡವರು. ಅದುದರಿಂದ ತಮ್ಮಹುಡುಗ ಮನೆಯಲ್ಲೇ ಇದ್ದು ಕುಲವೃತ್ತಿಯಲ್ಲಿಯೇ ತಂದೆಗೆ ಸಹಾಯವಾಗಿ ಇರಬೇಕೆಂದು ಇಚ್ಛಿಸಿದ್ದರು. ಆದರೆ ಹುಡುಗ ಹಠವಾದಿ. ಅದೂ ಅಲ್ಲದೆ ಇನ್ನೊಂದು ಕಾರಣವೂ ಉದ್ಭವಿಸಿತು. 

ಗ್ರಾಮದ ದೊಡ್ಡ ಶ್ರೀಮಂತರೂ ಹೇರಳ ಆಸ್ತಿಪಾಸ್ತಿ ಉಳ್ಳವರೂ ಆದ ಲಕ್ಷ್ಮೀಪತಯ್ಯ ಅಶ್ವತ್ಥಾಮನ ತಂದೆಯನ್ನು ಕರೆಸಿ ಗರ್ಜಿಸಿ ತರ್ಜಿಸಿದರು: “ನೋಡಿ, ನೀವು ನಮ್ಮ ಜಾತಿಯವರೇನೋ ಸರಿ, ಮತ್ತು ನಿಮ್ಮ ಮನೆತನವೂ ಹಳೆಯದು. ಮರ್ಯಾದೆಯುಳ್ಳದ್ದು, ಆದರೆ ನಮ್ಮ ಅಂತಸ್ತು ಬೇರೆ, ನಿಮ್ಮ ಅಂತಸ್ತು ಬೇರೆ. ಅಜಗಜಾಂತರ, ನಿಮ್ಮ ಮಾಣಿ ಅಶ್ವತ್ಥಾಮನಿಗೂ ನಮ್ಮ ಮಗಳು ಸುನೀತಿಗೂ ಸಲುಗೆ ಸ್ವಲ್ಪ ಹೆಚ್ಚಾಗಿದೆ ಎಂದು ತೋರುತ್ತದೆ. ಹೆಂಗಸರ ಸಂದಣಿಯಲ್ಲಿ ಗುಸುಗುಸು ಎಂದು ಏನೋ ಪಿಸುಮಾತು ಹರಡಿದೆ. ಇದು ಸರ್ವಥಾ ಅಸಾಧ್ಯ. ನಿಮ್ಮ ಮಾಣಿಗೆ ಸ್ಪಷ್ಟವಾಗಿ ಜಾಗ್ರತೆ ಹೇಳಿರಿ. ಇನ್ನುಮುಂದಕ್ಕೆ ಅವನು ಸುನೀತಿಯ ಹತ್ತಿರ ಸುಳಿದರೆ, ನನ್ನ ಕಿವಿಗೆ ಒಂದು ಮಾತು ಬಿದ್ದರೆ ಅವನ ಕಾಲನ್ನು ಕಡಿಸಿಯೇ ಬಿಟ್ಟೇನು. ನನ್ನನ್ನು ಕೆಣಕಿ ಈ ಊರಲ್ಲಿ ಯಾರೂ ಬದುಕಲಾರರು. ನಿಮ್ಮ ಜೀವಕ್ಕೂ ಸಂಚಕಾರ, ಜಾಗ್ರತೆ!” ಎಂದು ಗುಡುಗಿದರು. 

ಅಶ್ವತ್ಥಾಮನ ತಂದೆ-ತಾಯಿಗೆ ಭಯಸಂಚಾರವಾಯಿತು. ಮಗನನ್ನು ಕಾಂಚಿಗೆ ಕಳಿಸುವುದೇ ಉತ್ತಮ ಎಂದಾಯಿತು. 

ಅಶ್ವತ್ಥಾಮ ಕಾಂಚಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ಮರಳಿದಾಗ ಸುನೀತಿಗೆ ಮದುವೆಯಾಗಿ ಹೋಗಿತ್ತು. ಅಗರ್ಭಶ್ರೀಮಂತ ವರ. ಒಂದೆರಡು ಬಾರಿ ಜಾತ್ರೆಯ ಸಮಯದಲ್ಲೂ, ಸಮಾರೋಹಗಳಲ್ಲೋ ದೂರದಲ್ಲೇ ಸುನೀತಿಯನ್ನು ಕಂಡಾಗ ಇಬ್ಬರ ಮುಖದಲ್ಲೂ ದುಃಖ-ನಿರಾಸೆಗಳ ಮೋಡ ಹಬ್ಬಿತ್ತು. ಛಲದಂಕ ಅಶ್ವತ್ಥಾಮನ ಮೈ ಉರಿಯಿತು. ಕೊನೆಗೆ ಸಹಿಸಲಾರದೆ ಅಶ್ವತ್ಥಾಮ ಪುನಃ ಊರು ಬಿಟ್ಟು ಕಾಶಿಗೆ ಅಧ್ಯಯನಕ್ಕೆ ಹೋದ. ಕಾಶಿಯಿಂದ ಹಿಂದೆ ಮರಳಿದಾಗ ಆತನ ಮನಸ್ಸು ಒಂದು ಸ್ತಿಮಿತಕ್ಕೆ ಬಂದಿತ್ತು. ಆತ್ಮಸಂಯಮ ಉಂಟಾಗಿತ್ತು. 

ಬಂದವನೇ ಇಷ್ಟು ವರ್ಷಗಳ ತನಕ ಅಭ್ಯಸಿಸಿದ ವ್ಯಾಕರಣ, ತರ್ಕ, ವೇದ ಶಾಸ್ತ್ರಾದಿಗಳನ್ನೂ ಕುಲಸಂಪ್ರದಾಯವನ್ನೂ ತೊರೆದು ಬದಿಗಿಟ್ಟು ವ್ಯಾಪಾರ ಆರಂಭಿಸಿದ. ಎಲ್ಲರಿಗೂ ಆಶ್ಚರ್ಯ, ಪುರೋಹಿತರ ಏಕಮಾತ್ರ ಪುತ್ರ ಕುಲವೃತ್ತಿಯನ್ನು ಬಿಟ್ಟು ವರ್ತಕನಾಗುವುದೇ? ಅದೂ ಎಂತಹ ವ್ಯಾಪಾರ ? ಕಾಡುಗುಡ್ಡೆಗಳ ಮೂಲಕ ಮಣಸ ಮತ್ತು ಹೊಲೆಯರೊಡನೆ ಕಾಡಿನ ಉತ್ಪತ್ತಿ- ಏಲಕ್ಕಿ, ಪತ್ರ, ಜಾಯಿಕಾಯಿ, ಪುನುಗು, ನವಿಲುಗರಿ, ದಂತ, ಜಿಂಕೆಯ ಕೋಡು, ಕೃಷ್ಣಾಜಿನ, ವ್ಯಾಘ್ರ-ಚರ್ಮ, ಔಷಧ-ಮೂಲಿಕೆ, ಬಿದುರು ಇತ್ಯಾದಿಗಳ ವ್ಯಾಪಾರ, ದಂತ ಮತ್ತು ಪುನುಗಿನ ವ್ಯಾಪಾರದಲ್ಲಿ ತುಂಬಾ ಲಾಭಪಡೆದು ಧನವಂತನಾದ, ಮಣಸರಿಗೂ ಹೊಲೆಯರಿಗೂ ಅವನೆಂದರೆ ಬಹಳ ಮೆಚ್ಚಾಗಿತ್ತು. ಒಳ್ಳೆಯ ನ್ಯಾಯವಾದ ಕ್ರಯವನ್ನು ಅವರಿಗೆ ಕೊಟ್ಟು ಅವರನ್ನು ಸುಖಗಳನ್ನಾಗಿ ಧನವಂತರನ್ನಾಗಿ ಮಾಡಿದ. ಕಾಂಚಿ-ಕಾಶಿಗಳಲ್ಲಿ ಆಯುರ್ವೇದವನ್ನು ಕಲಿತ ಕಾರಣ ಅವರ ರೋಗರುಜಿನಗಳಿಗೆ ಚಿಕಿತ್ಸೆ ಮಾಡುತ್ತಿದ್ದ. ಅದೂ ಅಲ್ಲದೆ ಮುಖತಃ ಅವರೊಡನೆಯೂ ಅವರ ಗುರಿಕಾರರೊಡನೆಯೂ ಗೌರವದಿಂದ ವರ್ತಿಸಿ ಅವರ ಪ್ರೇಮವನ್ನು ಗಳಿಸಿದ್ದ. ಊರಿನ ಕುಚೋದ್ಯದ ಕೆಲವು ವಿದೂಷಕರು ಆತನನ್ನು “ಹೊಲೆಯರ ಶುಕ್ರಾಚಾರ್ಯ” ಎಂದು ಅವನ ಬೆನ್ನಹಿಂದೆ ಅಣಕಿಸಿದ್ದುಂಟು. ಆದರೆ ಆತನ ಮುಖದ ಎದುರು ಆತನನ್ನು ಕೆಣಕುವವರು ಬಹು ವಿರಳ. ಏಕೆಂದರೆ ಆತ ಛಲದಂಕ ಮಲ್ಲನೆಂದೂ ಬಹಿರಂಗಕ್ಕೆ ಶಾಂತರೂಪಿಯಾದರೂ ಕೆರಳಿದರೆ ಉಗ್ರಭಯಂಕರನೆಂದೂ ಜನಜನಿತವಾಗಿತ್ತು. ಈ ಕಾಂಚಿ ಕಾಶೀ ಪಂಡಿತ ಕೆರಳಿದರೆ ಕೊಲೆ ಮಾಡಲೂ ಹಿಂಜರಿಯ, ನಮ್ಮ ಸಾಧು ಪುರೋಹಿತರ ಸಂತಾನದಲ್ಲಿ ಈತ ಹೇಗೆ ಅವತರಿಸಿದನಪ್ಪಾ! ಪುಲಸ್ಯಋಷಿಯ ವಂಶದಲ್ಲಿ ರಾವಣಾಸುರ ಹುಟ್ಟಿದಂತಾಯಿತು. ಹೇಗೆಯೇ ಇರಲಿ, ಮಲಗಿದ ಸರ್ಪವನ್ನು ನಾವೇಕೆ ಕೆಣಕಬೇಕು” ಎಂದು ಆತನೊಡನೆ ಜಾಗರೂಕರಾಗಿಯೇ ವರ್ತಿಸುತ್ತಿದ್ದರು. 

ಪಾಪ! ಸುನೀತಿಯ ಅದೃಷ್ಟದಲ್ಲೇನೋ ಕಂಟಕವಿತ್ತು. ಅವಳ ತಂದೆ ಲಕ್ಷ್ಮೀಪತಯ್ಯ ತೀರಿಕೊಂಡರು. ಅಷ್ಟೇ ಅಲ್ಲ, ಹುಣ್ಣಿನ ಮೇಲೆ ಬೊಕ್ಕೆ, ಅವಳ ಗಂಡನೂ ವ್ಯಾಧಿಗ್ರಸ್ತನಾದ. ರೋಗ ದಿನೇ ದಿನೇ ಗಂಭೀರವಾಗುತ್ತಿತ್ತು. ಸುನೀತಿಗೆ ವೈಧವ್ಯವೇ ಗತಿ ಎಂದು ಎಲ್ಲರೂ ತಿಳಿದರು. ಅವಳ ಗಂಡನ ತಮ್ಮಂದಿರು ಅಣ್ಣನ ಅವಸಾನವನ್ನೇ ಉತ್ಕಂಠರಾಗಿ ನಿರೀಕ್ಷಿಸುತ್ತಾ ಮನೆತನದ ಧನಸಂಪತ್ತು ಆಸ್ತಿಪಾಸ್ತಿಗಳ ಸೂಕ್ಷ್ಮಲೆಕ್ಕಾಚಾರದಲ್ಲೇ ತದೇಕ ಧ್ಯಾನರಾಗಿ ತಲ್ಲೀನರಾಗಿದ್ದರು. 

ಇನ್ನೇನು ? ನತದೃಪ್ಪಳಾದ ಸುನೀತಿಯ ಮಂಗಲಸೂತ್ರ ಕಡಿಯುವದು, ಕೈಬಳೆಗಳು ಪುಡಿಯಾಗುವವು, ತಲೆ ಬೋಳಾಗುವದು; ಅನಂತರ ಮೈದುನ ನಾದಿನಿಯರ ಅಸಡ್ಡೆ ತಿರಸ್ಕಾರಗಳ ಹಂಗಿನ ಅನ್ನ 

ಅಷ್ಟರಲ್ಲೇ ಕ್ಷೌರಿಕ ಮುಂಡಪ್ಪ ನಡುನಡುಗುತ್ತಾ ಬಂದು ಕೈಮುಗಿದ. “ಬುದ್ಧಿ, ನಾನು ಬಡವ, ಮನೆತುಂಬಾ ಮಕ್ಕಳು ಮರಿ, ನನ್ನನ್ನು ಕೊಲ್ಲಿಸಬೇಡಿ. ಆ ಹಠಮಾರಿ ಬ್ರಾಹ್ಮಣವ್ಯಾಪಾರಿ ಅಶ್ವತ್ಥಾಮಯ್ಯ ನನಗೆ ಗದರಿಸಿ ಹೇಳಿದ್ದಾರೆ 'ನೀನಾಗಲೀ ಇನ್ಯಾರೋ ಕ್ಷೌರಿಕನಾಗಲೀ ಸುನೀತಿಯಮ್ಮನ ತಲೆ ಬೋಳಿಸಿದರೆ ನಾನು ನಿನ್ನ ತಲೆಯನ್ನೇ ಕಡಿಯುತ್ತೇನೆ. ಇದು ನನ್ನ ಶಪಥ' ಎಂದು, ಕ್ಷೌರಕ್ಕೆ ಸಲ್ಲುವ ಹಣ ನನಗೆ ಕೊಟ್ಟುಬಿಟ್ಟಿದ್ದಾರೆ. ಆ ಮನುಷ್ಯನನ್ನು ನಾನು ಕೆರಳಿಸಿದರೆ ನನ್ನ ಹೆಂಡತಿ-ಮಕ್ಕಳು ತಬ್ಬಲಿ. ನನ್ನನ್ನು ಕೊಲ್ಲಿಸಬೇಡಿ ನಿಮ್ಮದಮ್ಮಯ್ಯ” ಎಂದು ತಲೆಗೆ ಕೈಬಡಿದುಕೊಂಡು ಅಳತೊಡಗಿದ. 

ಅಷ್ಟರಲ್ಲೇ ಅಶ್ವತ್ಥಾಮನೂ ಬಂದ. ಒಂದು ಕೈಯಲ್ಲಿ ತಾಳೆಯೋಲೆಯ ಪುಸ್ತಕ, ಇನ್ನೊಂದರಲ್ಲಿ ಒರೆ, ಅವನ ಹಿಂದೆಯೇ ಅವನ ಒಕ್ಕಲಿನವರು ಮತ್ತು ಇನ್ನು ಸ್ವಲ್ಪ ಹಿಂದೆ ಅವನ ಆಪ್ತರಾದ ಹೊಲೆಯರು. 

ಅಶ್ವತ್ಥಾಮ ನೆರೆದ ಜನರನ್ನು ಒಮ್ಮೆದುರುಗುಟ್ಟಿ ನೋಡಿದ. ಆಮೇಲೆ ಶಾಂತವಾಗಿ ಗಂಭೀರವಾಗಿ ಹೇಳಿದ: “ಒಂದು ಮನುಷ್ಯಪ್ರಾಣಿ ತೀವ್ರ ದುಃಖ-ಸಂಕಟದಲ್ಲಿರುವಾಗ ಅದಕ್ಕೆ ಸಾಂತ್ವನಕೊಡುವದು ಧರ್ಮ. ಅದರ ಮೇಲೆ ಇನ್ನಷ್ಟು ದುಃಖ-ಸಂಕಟವನ್ನು ಹೇರಿ ಅವಮಾನಿಸಿ ಪೀಡಿಸುವುದು ಘೋರ ಅಧರ್ಮ, ಧರ್ಮಶಾಸ್ತ್ರಗಳಲ್ಲಿ ಸ್ತ್ರೀಯ ಪತಿ ಮೃತನಾದೊಡನೆಯೇ ಆಕೆಯ ತಲೆ ಬೋಳಿಸಬೇಕೆಂದು ವಿಧಿಸಿಲ್ಲ.” 

“ವಿಧಿಸಿದೆ” ಸುನೀತಿಯ ಮೈದುನ ಆರ್ಭಟಿಸಿದ. 

“ಹೌದೇ? ಯಾವ ಶಾಸ್ತ್ರದಲ್ಲಿ? ಸಂಬಂಧಿತ ಶ್ಲೋಕಗಳನ್ನು ಉದ್ದರಿಸಿ ಹೇಳಿ” ಅಶ್ವತ್ಥಾಮನೆಂದ. ನಿರುತ್ತರ, ನಿಶ್ಯಬ್ದ. 

“ಸರಿ, ನಿಮ್ಮಿಂದ ಉತ್ತರವಿಲ್ಲ. ಈಗ ಶ್ಲೋಕಗಳನ್ನು ಕೇಳಿರಿ... ಪರಾಶರನೇನೆಂದಿದ್ದಾನೆ ? ಘೋರ ಅಂಗೀರಸನೇನೆಂದಿದ್ದಾನೆ ? ಜಾಬಾಲಿಯಷಿ ಏನಂದಿದ್ದಾನೆ? ಕೇಳಿರಿ” ಅಶ್ವತ್ಥಾಮನೆಂದ. 

“ನಮಗೆ ನಿನ್ನ ಶ್ಲೋಕಗಳು ಬೇಡ, ನಿನ್ನ ಶಾಸ್ತ್ರವನ್ನು ನಾವು ಮನ್ನಿಸುವುದಿಲ್ಲ'- ಮೈದುನ ಗರ್ಜಿಸಿದ. “ಸರಿ” ಅಶ್ವತ್ಥಾಮನ ತುಟಿ ನಕ್ಕಿತು. ಕಣ್ಣು ಉರಿಯಿತು. 

“ನೀವು ನನ್ನ ಶಾಸ್ತ್ರವನ್ನು ಮನ್ನಿಸುವುದಿಲ್ಲ. ಆದರೆ ಇದನ್ನು ಮನ್ನಿಸುವಿರಷ್ಟೇ”? ಒರೆಯಿಂದ ತೀಕ್ಷ್ಮವಾದ ಖಡ್ಗ ಹೊರಬಂತು. ಅದರ ಸಂಜ್ಞೆಗೆ ಅವನ ಒಕ್ಕಲುಗಳೂ ಮಿತ್ರರೂ ಸಮೀಪ ಬಂದರು. ಒಕ್ಕಲುಗಳ ಕೈಯಲ್ಲಿ ಕತ್ತಿ, ಹೊಲೆಯರ ಕೈಯಲ್ಲಿ ಬಿಲ್ಲು-ಬಾಣ. 

“ಮಹಾಪಾಪ! ಧರ್ಮ-ಸಂಸ್ಕಾರದಲ್ಲಿ ವಿಘ್ನ ಮಹಾಪಾಪ!” 

“ಅದು ನಿಮ್ಮ ಅಭಿಪ್ರಾಯ, ನನ್ನ ಶಾಸ್ತ್ರದಲ್ಲಿ ಹಾಗೆ ಹೇಳಿಲ್ಲ. ಅದು ಹೇಗೂ ಇರಲಿ, ಬ್ರಹ್ಮಹತ್ಯೆಯೂ ಮಹಾಪಾಪವೇ ತಾನೆ?” ಅಶ್ವತ್ಥಾಮನ ಮುಖ ಕಲ್ಲಿನಂತಾಗಿತ್ತು. 'ನೀವು ನನ್ನ ಮಾತಿನ ವಿರುದ್ಧ ನಡೆದರೆ ಇಂದು ಬಹುಸಂಖ್ಯೆಯಲ್ಲಿ ಬ್ರಹ್ಮಹತ್ಯೆ ಆದೀತು. ನೀವು ಶಾಸ್ತ್ರವನ್ನು ಮನ್ನಿಸುವುದಿಲ್ಲ. ಆದರೆ ಶಸ್ತ್ರವನ್ನಾದರೂ ಮನ್ನಿಸುವಿರಷ್ಟೇ ?” 

ಅಷ್ಟರಲ್ಲಿ ಸುನೀತಿಯ ಅತ್ತೆ-ನಾದಿನಿಯರು ಹೊರಬಂದರು. “ಸಕೇಶಿಯನ್ನು ಮನೆಯೊಳಗೆ ಹೇಗೆ ಇಟ್ಟುಕೊಂಡೇವು?” ಎಂದು ವಿಕಟವಾಗಿ ಚೀತ್ಕರಿಸಿದರು. 

“ಸರಿ ನಿಮ್ಮ ಇಚ್ಛೆ, ಸುನೀತಿಯಮ್ಮನವರೆ, ತಾವು ಹೊರಗೆ ಬನ್ನಿರಿ, ನಿಮಗೆ ಈ ಮನೆಯಲ್ಲಿ ಇನ್ನು ಸ್ಥಳವಿಲ್ಲ.” 

ಅತ್ತೆ-ನಾದಿನಿಯವರ ಬಾಯಿಯಿಂದ ಅಸಹ್ಯ ಅಶ್ಲೀಲ ಶಬ್ದಗಳು ವಾಂತಿಯಂತೆ ಉರುಳತೊಡಗಿದುವು. “ನಮಗೆ ಗೊತ್ತಿದೆ ಹಳೆಯ ಕಥೆ. ಆ ಮನೆಹಾಳಿಗೂ ನಿನಗೂ ಹಳೆಯ ಹಾದರದ ಸಂಬಂಧ. ಎಲ್ಲರಿಗೂ ಗೊತ್ತು. ತಿಳಿದೂ ತಿಳಿದೂ ಈ ಕುಲಟಿಯನ್ನು ಮನೆಗೆ ತಂದೆವು. ನಮ್ಮದೇ ತಪ್ಪಾಯಿತು. ನನ್ನ ಚಿನ್ನದಂಥಾ ಮಗನನ್ನು ಅವಳ ಹಾಳು-ಹಣೆಬರೆಹಕ್ಕೆ ಬಲಿಕೊಟ್ಟೆವು. ನೀನೀಗ ನಿನ್ನ ಮಿಂಡಿಯ ಚಂದವನ್ನು ನೋಡಲು ಬಂದಿ.” 

“ಅಮ್ಮನವರೇ, ಬಾಯಿ ಮುಚ್ಚಿ, ಬ್ರಹ್ಮಹತ್ಯೆಯೊಡನೆ ಹತ್ಯಾ ಪಾಪವೂ ಆಗಬೇಕೆ ?” ಕೂಡಲೇ ಇಬ್ಬರೂ ಹೆಂಗಸರ ಕುತ ಚೀತ್ಕಾರ ಸಬ್ಧವಾಯಿತು. 

ಆದರೆ ಸುನೀತಿ ಅಳುತ್ತಳುತ್ತ ಬಂದಳು. ನನ್ನ ಅದೃಷ್ಟ ಹಾಳು, ನೀವೇಕೆ ಬಂದಿರಿ? ಆಗುವದೆಲ್ಲಾ ಆಗಲಿ. ನನಗೆ ಜೀವವೇ ಬೇಡ, ನನ್ನ ಹಣೆಯಬರಹ ನನ್ನ ಗಂಡನನ್ನು ನುಂಗಿತು. ನಾನು ಚಿತೆಗೆ ಹಾರಿ ಸತಿಯಾಗುವನು. ಈ ಹಾಳುಜೀವ ಭಸ್ಮವಾಗಲಿ...” ಎಂದಳು. 

“ಸುನೀತಿಯಮ್ಮ.. ನಾನು ಜೀವಂತನಿರುವವರೆಗೆ, ನನ್ನ ಕೈಯಲ್ಲಿ ಕತ್ತಿ ಇರುವವರೆಗೆ ಅದು ಆಗಲಾರದ ಮಾತು. ಈ ಮನೆಯಲ್ಲಿ ಇನ್ನು ಮುಂದಕ್ಕೆ ನಿಮ್ಮ ಜೀವನ ಹೇಗೆ ಎಂದು ನಿಮ್ಮ ಅತ್ತೆ-ನಾದಿನಿಯವರ ಅಮೃತವಾಣಿಯಿಂದ ಸ್ಪಷ್ಟವಾಯಿತು. ಈ ಹೊಲಸುಕೊಂಪೆಯಲ್ಲಿ ಇನ್ನು ಇರುವದು ಸರಿಯಲ್ಲ. ನಿಮ್ಮ ತಾಯಿಯವರು ಒಪ್ಪಿಕೊಂಡರೆ ಅವರೊಡನೆಯೇ ಇರಿ. ಆದರೆ ಯಾರ ಬಾಯಿಯಿಂದ ಇಂಥಾ ಅಶ್ಲೀಲ-ಶಬ್ದಗಳನ್ನು ಕೇಳಿದಿರೋ, ಅವರ ಕೈಗಳಿಂದ ಒಂದು ಗುಟುಕು ನೀರು ಕೂಡ ಕುಡಿಯುವದೂ ಅಸಹ್ಯ, ಬನ್ನಿ ನಡೆಯಿರಿ.” ಹಲವು ವರ್ಷಗಳು ಕಳೆದವು. ಒಂದು ದಿನ 

“ಏಕೆ ಅಳುತ್ತೀಯೇ ? ಏನಾಯಿತು?” ಎಂದು ಅಶ್ವತ್ಥಾಮಯ್ಯ ಕೇಳಿದರು. ಪತ್ನಿ ಸುನೀತಿಯ ರೋದನ ಇನ್ನೂ ಉಕ್ಕಿತು. ಬಿಕ್ಕಿ ಬಿಕ್ಕಿ ಅಳತೊಡಗಿದಳು. 

ಕೊನೆಗೆ ಕಣ್ಣೀರು ಸುರಿಸುತ್ತಾ ನಿನ್ನೆ ರಾತ್ರಿ ನನಗೆ ಭಯಂಕರ ಸ್ವಪ್ನ ಕಂಡಿತು. ನನ್ನ ಎದೆ ಸೀಳಿದಂತಾಗಿದೆ ಎಂದಳು. 

“ಅಯ್ಯೋ ಸುನೀತಿ! ಸ್ವಪ್ನ ಕಂಡು ಭಯಪಡುವದೂ ಉಂಟೇ? ಎಂತಹ ಮಕ್ಕಳಾಟಿಕೆ ? ರಾತ್ರಿಯ ಊಟದ ನಂತರ ಹಲಸಿನ ಹಣ್ಣನ್ನು ಬಡಹೊಟ್ಟೆಯ ಮೇಲೆ ಹೇರಿದರೆ ಇದೇ ಫಲ. ಅಜೀರ್ಣವಾದರೆ ಸ್ವಪ್ನ ಬಿದ್ದೇ ಬೀಳುತ್ತೆ. ಅದಕ್ಕೆಂದೇ ಗಾದೆಮಾತು-ಹಸಿದು ಹಲಸು; ಉಂಡು ಮಾವು ಎಂದು. ಬೆಳಿಗ್ಗೆ ಹೊಟ್ಟೆ ಹಸಿದಿರುವಾಗ ಹಲಸಿನಹಣ್ಣು ದಿವ್ಯಫಲ, ರಾತ್ರಿಯ ಹೊತ್ತಿಗೆ ಹಾಲು-ಮೊಸರನ್ನ ತಿಂದ ನಂತರ ಅದು ಜಡ.” 

“ನಿಮಗೆ ಎಲ್ಲವೂ ಪರಿಹಾಸವೇ. ನನಗೆ ಕಾಡಿಚ್ಚಿನಂತಹ ಚಿಂತೆ, ನೂರು ಚೇಳು ಕಡಿದಂತಾಗಿದೆ. ಸ್ವಪ್ನದಲ್ಲಿ ಅಪ್ಪ ಅಮ್ಮ ಕಂಡರು. ಅಮ್ಮನ ಕಣ್ಣಲ್ಲಿ ನೀರಿನ ಧಾರೆ. ಅಪ್ಪನ ಕಣ್ಣಲ್ಲಿ ಅಗ್ನಿಜ್ವಾಲೆ. 'ನಮ್ಮನ್ನು ನರಕಕ್ಕೆ ಕಳಿಸಿದಿಯೇ ಮನೆಹಾಳಿ, ನಿನಗೆ ಸುನೀತಿ ಎಂದು ಹೆಸರಿಟ್ಟುದಕ್ಕೆ ಸಾರ್ಥಕವಾಯಿತು. ಕುನೀತಿಯಾಗಿಯೇ ಪಾಪಿಷ್ಟೆ. ಮಂಗಲಸೂತ್ರವನ್ನು ಇಟ್ಟುಕೊಳ್ಳಲು ನಿನಗೇನು ಅಧಿಕಾರ?' ಎಂದು ಹೇಳಿ ಕಿತ್ತಳೆದರು. ನಾನು ಬಿಡಲಿಲ್ಲ. ಹೋರಾಡಿದೆ, ನೋಡಿ ತುಂಡಾಗಿದೆ. 

“ಹಾ! ನಾನು ಹೇಳಿದೆನಲ್ಲಾ! ಹಲಸಿನ ಹಣ್ಣಿನ ಭಾರಕ್ಕೆ ತುಂಡಾಯಿತು. ಅದಕ್ಕೇನು? ಈಗಲೇ ಜೋಡಿಸೋಣ. ಒಂದು ಘಳಿಗೆಯ ಕೆಲಸ. ಇಷ್ಟಕ್ಕೇ ಅಳುವುದೇ? ಬೆಳಿಗ್ಗೆ ಎದ್ದು, ಸೂರ್ಯನಿಗೆ ಕೈಮುಗಿದು, ಗೋಗಳಿಗೆ ನೀರು ಕುಡಿಸಿ, ಹುಲ್ಲುಗಾವಲಿಗೆ ಕಳಿಸಿ, ತುಳಸಿಗೆ ಪ್ರದಕ್ಷಿಣೆ ಮಾಡಿ, ಮುಗುಳು ನಗುತ್ತಾ ಇರಬೇಕು. ಇದು ನಮ್ಮ ಸನಾತನಧರ್ಮ.' 

“ನಿಮ್ಮ ಮಿದುಳಿನಲ್ಲಿ ಹಲಸಿನಹಣ್ಣೆ ತುಂಬಿದೆ. ಸ್ವಪ್ನದಲ್ಲಿ ಅಪ್ಪ ಅಮ್ಮ ಹೇಳಿದರು- ಪಾಪಿಷ್ಟೆ ನೀನು ತುಳಸಿಯನ್ನು ಮುಟ್ಟುವೆಯಾ? ಕುಲವನ್ನೇ ನಾಶಮಾಡಿದಿ, ಶಾಕಿನಿ ಡಾಕಿನಿ ಎಂದು... ನಾನೇ ಪಾಪಿ, ನೀವೇಕೆ ನನ್ನ ಮೋಹಕ್ಕೆ ಬಲಿಯಾಗಿ ಜಾತಿಕಟ್ಟಿರಿ? ನನ್ನ ಅನಿಷ್ಟ ಹಣೆಯಬರಹ ನನ್ನ ಗಂಡನನ್ನೂ ನುಂಗಿತು. ನಿಮ್ಮ ಬ್ರಾಹ್ಮಣ್ಯಕ್ಕೂ ಬೆಂಕಿಕೊಟ್ಟಿತು. ಆದರೆ ತಪ್ಪು ನಿಮ್ಮದೇ. ಸಾವಿರ ಸಲ ಬೇಡಿದೆ. ನಾನು ನಿಮ್ಮ ತೊತ್ತಾಗಿಯೇ ಇರುವ ನಿಮ್ಮ ಮಿಂಡಿಯಾಗಿಯೇ ಇರುವೆ. ಅದೇ ನನಗೆ ತೃಪ್ತಿ. ಮದುವೆ ನನಗೆ ಬೇಡ ಎಂದು. ನೀವು ಕೇಳಲಿಲ್ಲ. ನಿಮ್ಮ ಅಹಂಕಾರವೆಂದರೆ ಐರಾವತ, ನಿಮ್ಮದೇ ಛಲ, ನಿಮ್ಮದೇ ಹಠ.” 

“ಸುನೀತಿ, ನೀನು ನನ್ನ ಮಿಂಡಿಯಾಗಿ ತೊತ್ತಾಗಿ ಇರಲು ಸಿದ್ಧಳಾಗಿದ್ದಿರಬಹುದು. ಆದರೆ ನಾನು ನಿನ್ನ ಮಿಂಡನಾಗಿರಲು ಸಿದ್ಧನಿರಲಿಲ್ಲ. ನನಗೆ ನಾನು ನಿನ್ನ ಕೈ ಹಿಡಿದ ಗಂಡನೇ ಆಗಬೇಕು ಎಂಬ ಹಠವಿತ್ತು. ನಾನು ಅಹಂಕಾರಿ ಇರಬಹುದು. ಛಲದಂಕನಿರಬಹುದು. ಆದರೆ ವಂಚಕನಲ್ಲ. ನನಗೆ ತೊತ್ತೂ ಬೇಡ, ಮಿಂಡಿಯೂ ಬೇಡ, ನನಗೆ ಬೇಕಿದ್ದುದು ನನ್ನನ್ನು ಮೆಚ್ಚಿದ, ನಾನು ಮೆಚ್ಚಿದ ಹೆಂಡತಿ-ಧರ್ಮಪತ್ನಿ. ಹಾಗೆಂದೇ ಅಗ್ನಿಸಾಕ್ಷಿಯಾಗಿ ವಿಧಿವತ್ತಾಗಿ ನಮ್ಮ ನಿಮ್ಮ ವಿವಾಹವಾಯಿತು.” 

“ವಿವಾಹವಂತೆ! ವಿಧವೆಯೊಡನೆ ಎಂತಹ ವಿವಾಹ? ಪುರೋಹಿತರಿಲ್ಲದ ವಿವಾಹ, ನೆಂಟರಿಷ್ಟರೆಲ್ಲರೂ ಬಹಿಷ್ಕಾರಮಾಡಿದ ವಿವಾಹ.” 

ಅಶ್ವತ್ಥಾಮ ನಕ್ಕ, “ನಮ್ಮ ವಿವಾಹಕ್ಕೆ ನಾನೇ ಪುರೋಹಿತ, ಕಾಂಚೀಪುರ ಕಾಶೀಧಾಮದಲ್ಲಿ ಶಾಸ್ತ್ರ ಕಲಿತ ಪುರೋಹಿತ! ಸಾಕ್ಷಾತ್ ಧನಂಜಯನೇ ಸಾಕ್ಷಿಯಾಗಿದ್ದಿರುವಾಗ ಯಾರು ಬಹಿಷ್ಕಾರ ಹಾಕಿದರೇನು ?” 

'ಧನಂಜಯ? ಯಾರವನು ? ಯಾವೂರಿನ ಧನಂಜಯ?” 

“ಹಡ್ಡಪ್ಪಾ! ನಿನ್ನ ತಂದೆ ಇಷ್ಟನ್ನೂ ನಿನಗೆ ಕಲಿಸಲಿಲ್ಲ. ಸುಮ್ಮನೆ ಹಲಸಿನಹಣ್ಣಿನಲ್ಲಿ ಅವಿತುಕೊಂಡು ನಿನ್ನ ನಿದ್ರೆ ಕೆಡಿಸುತ್ತಾರೆ. ಧನಂಜಯನೆಂದರೆ ಅಗ್ನಿ... ಮತ್ತೆ ನಾನು ಅಹಂಕಾರಿ ಎಂದು ನೀನು ಬೈದಿ. ಆದರೆ ವೇದಶಾಸ್ತ್ರಗಳಲ್ಲಿ ಏನು ಬರೆದಿದೆ ಎಂದು ಕಷ್ಟಪಟ್ಟು ಕಲಿತಿದ್ದೇನೆ... ಮತ್ತೆ ಸತ್ತವರ ಕೂಡ ಏಕೆ ತರ್ಕ ? ನಮಗೇನು ಕಡಿಮೆಯಾಗಿದೆ? ಗುಣವಂತೆ ಮಗಳು, ವಿದ್ಯಾವಂತೆ... 

“ಗಂಡುಬೀರಿ ಮಗಳು ಅನ್ನಿ. ಅವಳಿಗೂ ನಿಮ್ಮದೇ ಹಠ, ಛಲ, ಗಂಡಸರ ಹಾಗೆ ಓಡಾಡುತ್ತಾಳೆ. ಕುದುರೆ-ಸವಾರಿಮಾಡುತ್ತಾಳೆ, ಒಕ್ಕಲುಗಳ ಮೇಲೆ ಅಧಿಕಾರ ನಡೆಸುತ್ತಾಳೆ.” 

“ಸುನೀತಿ, ಸುಮ್ಮನೆ ಏಕೆ ಹರಟುತ್ತೀ ? ನಿನಗೇ ಗೊತ್ತು. ಒಕ್ಕಲುಗಳಿಗೆ ಅವಳ ಮೇಲೆ ಅಷ್ಟು ವಿಶ್ವಾಸ, ಗೌರವ, 'ಸಣ್ಣಯಜಮಾನಿತಿಯ ಮಾತು ಕೇಳಿದರೆ ಕೃಷಿ ಸುಗ್ಗಿಯಾಗುತ್ತೆ. ಕಣಜ ತುಂಬುತ್ತೆ' ಎಂದು ಅವರೇ ಬಾಯಿತುಂಬಾ ಹೇಳುತ್ತಾರೆ.” 

“ನಿಮ್ಮ ಚಿನ್ನದ ಗೊಂಬೆಯನ್ನು ಬಾಯ್ತುಂಬ ಹಾಕಿ ಹೊಗಳಿರಿ. ಆದರೆ ಅವಳಿಗೆ ಗಾಯತ್ರೀ-ಮಂತ್ರ ಕಲಿಸಿದ್ದು ಏಕೆ? ಎಂತಹ ಅಧರ್ಮ, ಹೆಂಗಸರಿಗೆ ಗಾಯತ್ರಿಯೇ ? ಛೇ!” 

“ನನ್ನ ಮಗಳಿಗೆ ನಾನು ಕಲಿತ ಜ್ಞಾನವನ್ನು ಬೋಧಿಸಿದರೆ ತಪ್ಪೇ? ಮತ್ತೆ ಕೇಳು: ಪೂರ್ವದಲ್ಲಿ ನಮ್ಮ ಪೂರ್ವಜರು ಹೆಣ್ಣುಮಕ್ಕಳಿಗೂ ಬ್ರಹೋಪದೇಶವನ್ನು ಮಾಡಿ ಯಜ್ಯೋಪವೀತವನ್ನೂ ಕೊಡುತ್ತಿದ್ದರು. ಕಾಲ ಕೆಟ್ಟು ಅಜ್ಞಾನ ತುಂಬಿ, ನಾವು ಆ ಸಂಸ್ಕಾರವನ್ನು ಮರೆತೆವು. ಆದರೆ ಇಂದಿಗೂ ಆರ್ಯಜನಾಂಗದ ಅಗ್ನಿಪೂಜಕ ಜರತುಷ್ಟ-ಧರ್ಮಿಗಳಲ್ಲಿ ಈ ರೂಢಿ ತಪ್ಪಿಲ್ಲ. ಹೆಣ್ಣು ಗಂಡು ಇಬ್ಬರಿಗೂ ಯದ್ಯೋಪವೀತಧಾರಣೆ ಇದೆ... ಮತ್ತೆ ನಮಗೆ ಜನನಿಂದೆಯ ಭಯವೇನು ? ನಾವು ಅಗ್ರಹಾರ ಬಿಟ್ಟಿದ್ದೇವೆ. ನಾನೇ ಬೆವರು ಸುರಿಸಿ ಚಿನ್ನದ ಹರಿವಾಣದಂತೆ ಮಾಡಿದ ನನ್ನ ಗದ್ದೆಗಳಿವೆ. ತೋಟಗಳಿವೆ; ನಮ್ಮ ವಿಶ್ವಾಸಿಗಳಾದ ಒಕ್ಕಲುಗಳಿದ್ದಾರೆ. ಅವರೇ ನಮಗೆ ನೆಂಟರಿಷ್ಟರು, ಬಂಧುಬಾಂಧವರು.” “ಬಂಧುಬಾಂಧವರಂತೆ ನೀಚ ಜಾತಿಯವರು.” 

“ಸುನೀತಿ, ನಿನಗೆ ಸಾವಿರ ಸಲ ಹೇಳಿದ್ದೇನೆ. ಇನ್ನಾದರೂ ತಿಳಿ. ಯಾರು ನೀಚಕೃತ್ಯಗಳನ್ನು ಮಾಡುತ್ತಾರೋ, ಯಾರ ವರ್ತನೆ ನೀಚವೋ ಅವರು ನೀಚ, ಯಾರ ವರ್ತನೆ ಉಚ್ಚವೋ ಅವರು ಉಚ್ಚ. ನೀಚಜಾತಿ ಎಂಬ ಶಬ್ದಕಲ್ಪನೆ ನಮ್ಮ ಧರ್ಮಕ್ಕೆ ವಿರುದ್ಧ 

“ನಿಮ್ಮ ಮೊಂಡಶಾಸ್ತ್ರ ಕೇಳಿ ಕೇಳಿ ನಾನು ಕಿವುಡಿಯಾದೆ. ಆದರೆ ನಿಮ್ಮ ಚಿನ್ನದಗೊಂಬೆಯನ್ನು...” “ಅವಳನ್ನು ಚೆನ್ನದಗೊಂಬೆ ಎಂದು ಮೂದಲಿಸಬೇಡ, ನಿಜಕ್ಕೂ ನಮ್ಮ ಮಗಳು ಶಾಕಂಭರಿಯದು ಉಕ್ಕಿನ ಜೀವ, ಅವಳಲ್ಲಿ ಸಾಹಸವಿದೆ. ವಿವೇಕವಿದೆ. ಬುದ್ಧಿಶಕ್ತಿಯಿದೆ. ದೇಹಶಕ್ತಿಯಿದೆ.” 

“ಅದೇ 'ನಾನೂ ಅಂದುದು, ಗಂಡುಬೀರಿ ಹಿಡಿಂಬಿ ಎಂದು. ನಾವಿಬ್ಬರೂ ಕುಲೀನಸಮಾಜಕ್ಕೆ ಬೆನ್ನುಹಾಕಿ ಅರಣ್ಯವಾಸದಲ್ಲಿ ಸಾಯುತ್ತೇವೆ. ಆದರೆ ನಮ್ಮ ಹೊಟ್ಟೆಯ ಮಗಳಿಗೇನು ಗತಿ? ಯಾವ ಪ್ರಾಣಿ ಅವಳ ಕೈಹಿಡಿದಾನು ? ಅವಳೇನು ಜೋಗಿನಿಯಾಗಿ ನಿತ್ಯಕನ್ನೆಯಾಗಿಯೇ ಇರಬೇಕೆ? ಅಥವಾ ನನ್ನಂತೆಯೇ ಮುಖ ಮುಚ್ಚಿಕೊಂಡು... 

“ಕೇಳು ಸುನೀತಿ, ನಮ್ಮ ಶಾಕಂಭರಿಯ ಚಿಂತೆ ನಿನಗೆ ಬೇಡ, ಅವಳಲ್ಲಿ ರಾಜಕಾರಣಿಯಾಗುವ ಗುಣವಿದೆ, ಪ್ರಜ್ಞೆಯಿದೆ, ಯೋಗ್ಯತೆಯಿದೆ.” ವಿಚಾರವೇ ?” 

“ಹೊಲೆಯರ ಗುರಿಕಾರನ ಕೈಹಿಡಿದು ಕೊರಗರ ಅರಸಿಯಾಗಬೇಕೆಂದು ನಿಮ್ಮ 

“ನಿನ್ನ ಮಗಳ ಗುಣವನ್ನು ತಿಳಿದೂ ಹೀಗೆ ಏಕೆ ಬಡಬಡಿಸುತ್ತೀ ? ಅವಳ ಗುಣದಿಂದ, ಅವಳ ದಕ್ಷತೆಯಿಂದ, ಅವಳ ವಿವೇಕದಿಂದ, ಅವಳ ಕೈ ಹಿಡಿದವನು ಅರಸನಾಗಬಲ್ಲ. 

“ಏನು ಅರಸನೋ, ಏನು ಆಗಸನೋ ? ನಿಮ್ಮ ಮಾತಿಗೆ ತುದಿಬುಡವಿಲ್ಲ, ನಾನು ನಿಮ್ಮನ್ನೇಕೆ ದೂರಲಿ ? ನಾನು ಅದೃಷ್ಟ ಕೆಟ್ಟವಳು, ನನ್ನ ಪಾಪದಿಂದ ನೀವೂ ಕುಲಕೆಟ್ಟಿರಿ. ನಾನೂ ಕುಲಕೆಟ್ಟೆ, ಆದರೆ ಶಾಕಂಭರಿಗೆ ತುಸು ಬುದ್ದಿ ಹೇಳಿ. ಗಂಡುಬೀರಿಯಾಗಿರುವುದು ಒಂದು ಮಾತಾಯಿತು, ಆದರೆ ಹದಕೆಟ್ಟು ಹೊಲೆಯರ ನದ್ದನೊಡನೆ ಸಲಿಗೆ ಮಾತನಾಡುವುದು ಸರಿಯಲ್ಲ. ಇತರ ಒಕ್ಕಲುಗಳಿಗೂ ಇದು ಅಸಹ್ಯ ಎಂದು ಕಂಡಿದೆ. ನಿಮ್ಮೊಡನೆ ಬಾಯಿಬಿಚ್ಚಿ ಹೇಳಲು ಧೈರ್ಯವಿಲ್ಲ. ನೀವು ಛಲದಂಕರು. ಮತ್ತೆ ಮಾರುದ್ದ ವ್ಯಾಖ್ಯಾನ ಮಾಡಿ ಪುರಾಣ ಇತಿಹಾಸ ಶಾಸ್ತ್ರ ಹೇಳುತ್ತೀರಿ. ಆದರೆ ನನಗೆ ಪಿಸುಮಾತಿನ ದೂರು ತಲುಪಿದೆ. ಸಣ್ಣಯಜಮಾನಿತಿ ಹೊಲೆಯರ ನದ್ದನೊಡನೆ ಇಷ್ಟು ಸಲಿಗೆ ಮಾತನಾಡುವುದು ಚಂದವಲ್ಲ ಎಂದು.” 

“ನದ್ದ? ನದ್ದ ಯಾರು? ಓಹೋ ನಂದ, ಕೊರಗರಾಜ ಹುಂಬಾಸಿಕನ ಸಂತಾನದ ಪೋರ.” ಅಶ್ವತ್ಥಾಮಯ್ಯನ ಮುಖದಲ್ಲಿ ವಿಲಕ್ಷಣವಾದ ಚಿಹ್ನೆ ಹುಟ್ಟಿತು. ಮನಸ್ಸಿನೊಳಗೆಯೇ “ದೈವಸಂಕಲ್ಪ ಯಾರಿಗೆ ಗೊತ್ತು? ತಿಳಿಯದೇ ಮಾತನಾಡುವವರ ಬಾಯಲ್ಲಿ ವಿಧಿವೈಚಿತ್ರದ ಸಂಕೇತವಿರಬಹುದೇ? ಯಾರು ಬಲ್ಲರು ? ಕದಂಬರಾಜನ ಅಳಿಯ... ಲೋಕಾದಿತ್ಯನು ಹುಂಬಾಸಿಕ ರಾಜನನ್ನು ಕೊಲ್ಲದೇ ಹೋಗಿದ್ದರೆ. ಇಂದಿಗೂ ಹುಂಬಾಸಿಕನ ಕೊರಗವಂಶದವರೇ ಈ ರಾಜ್ಯವನ್ನು ಆಳಬಹುದಿತ್ತು. ಭವಿಷ್ಯವನ್ನು ಯಾರು ಬಲ್ಲರು ? ಕಾಲಚಕ್ರ ಹೇಗೆ ತಿರುಗುವುದೋ ಯಾರಿಗೆ ಗೊತ್ತು?” ಎಂದುಕೊಂಡರು. 

ಬಹಿರಂಗವಾಗಿ “ಸುನೀತಿ, ನೀನು ವೃಥಾ ಕಳವಳ ಮಾಡಬೇಡ, ನಮ್ಮ ಶಾಕಂಭರಿ ಬುದ್ಧಿವಂತೆ, ಜಾಣೆ. ದೇವರು ಕೊಟ್ಟ ವಿವೇಕ ಕೈಬಿಡದು. ಅವಳ ಭವಿಷ್ಯ ಉಜ್ವಲ ಎಂದು ನನಗೆ ಪೂರ್ಣವಿಶ್ವಾಸ, ಮತ್ತೆ ದೈವೇಚ್ಛ” ಎಂದರು. 

ಹುಂಬಾಸಿಕನ ಸಂತಾನದ ಪೋರ ನದ್ದನೂ ಅವನ ಮಿತ್ರ ಬಾಹುದಂಡನೂ ಕದಂಬರಾಜನೊಡನೆ ಯುದ್ಧಮಾಡಿ ಯಶಸ್ವಿಯಾಗಿ ರಾಜ್ಯವನ್ನು ಕಟ್ಟಿದರು. ನದ್ದ ನಂದರಾಜನಾಗಿ ತೌಳವ ದೇಶವನ್ನು ಉತ್ತರ ದಿಕ್ಕಿನಿಂದ ಹಿಡಿದು ಮಂಜೇಶ್ವರದವರೆಗೆ ಆಳಿದನು. ಶಾಕಂಭರೀದೇವಿಯು ನಂದರಾಜನ ಸಹಧರ್ಮಿಣಿಯಾಗಿ ಅವನೊಡನೆ ಸಿಂಹಾಸನಸ್ಥಳಾಗಿ ಬಹುದಕ್ಷತೆಯಿಂದ ರಾಜಕಾರ್ಯಗಳಲ್ಲಿ ನೆರವಾಗಿ ಕೀತಿವಂತಳಾದಳು. ರಾಜಧಾನಿಯ ಹೆಸರು ನಂದಾಪುರ (ನಂದಾವರ) ಎಂದಾಯಿತು. ಅಲ್ಲಿ ಭವ್ಯವಾದ ನಂದೇಶ್ವರದೇಗುಲವೂ ನಿರ್ಮಿತವಾಯಿತು. ಮಹಾರಾಜ ನಂದರಾಜನು ನಂದೇಶ್ವರದೇಗುಲದಲ್ಲಿ ಗರ್ಭಗೃಹದ ಹೊರಗೆ ಅಶ್ವತ್ಥಾಮಯ್ಯನ ಮೂರ್ತಿಯನ್ನು ಇರಿಸಲು ಇಚ್ಛಿಸಿದನು. ಆದರೆ ಮಹಾರಾಣಿ ಶಾಕಂಭರಿಯು ಒಪ್ಪಲಿಲ್ಲ. “ನನ್ನ ತೀರ್ಥರೂಪರು ಕರ್ಮಯೋಗಿ ಗಳಾಗಿದ್ದರು. ಅವರಿಗೆ ಬಾಹ್ಯಾಡಂಬರ ಅಪ್ರಿಯ” ಎಂದಳು. 

ನಂದರಾಜನು ಸುದೀರ್ಘ ಕಾಲ ಆಳಿ ಸ್ವರ್ಗವಾಸಿಯಾದನು. ಅವನ ನಂತರ ಅವನ ಮಗ ವಿಜಯಾ ನಂದನು ಪಟ್ಟಕ್ಕೇರಿದನು. ವಿಜಯಾನಂದನ ನಂತರ ಅನಂತನಂದ; ಅನಂತನಂದನ ನಂತರ ವಾಮನನಂದ ರಾಜ್ಯವನ್ನು ಆಳಿದನು. 


Comments

Popular posts from this blog

Team Prakasam

Team Prakasam during one of it's Pot-luck Party on 17-03-2013 ( JOIN US HERE ) We at Prakasam  believe in team work and building a strong team.  All the work Prakasam has done in the past decade ( Kala Krushi Page ) has been possible because of the selfless and unconditional support of its team members.  Where there is a team there would be work related to performing arts and also many more merry gatherings, parties, team holidays etc.  LOOK AT US WHEN WE PLAY & WHEN WE WORK . We are listing the official ones below to enthuse and entertain committed performing arts lovers to join us as volunteers.  Join us by applying to our Production Internship Programme  or by answering 10 simple questions, CLICK HERE . All our Crazy Empathy Videos (even before there was tiktok or reels) Annual Trip 2023 Secret Santa+6 Birthdays+Mini Potluck on 25 Dec 2013 Niswarga trip post KHKS4 fest, 19 April 2013 IPL6 Empathy a Jumping J...

Intern with Prakasam

Logo If you are keen to do theatre, want to be a Thespian from a Topophobian? want to do something to break the monotony of life? Come and join us as a  Production Intern .  Fill in THIS FORM  & let us know your intent to join Prakasam. The Production Intern Program offers you the opportunity to work alongside professional artists and managers at the forefront of an award-winning regional not-for-profit theatre group.  Please note that during the production internship two days absence is accepted, a third day if the reason is genuine.  If you can not attend more than three day's then it would be difficult for us to spend time with you and also on our production.  Kindly stick to the day's and times mentioned for the production.  This is what would define your interest and commitment the two basic characters we look at as a team and which is primary to any theatre production. Potluck Face of the Team :) Read on the FAQ's for further...

Katha Sangama "Bouquet of Stories"

Katha Sangama "Bouquet of Stories"  There has been a trend of short plays in the modern time of timelessness. We are so used to instant food, job, friendship, money we are also bombarded with requests for short plays. We now have successfully prepared the “Bouquet of Stories” exclusively for you. Marking the 100th birth anniversary of Kodagina Gowramma , the gallant feminist writer at her times (1912-1939) we are staging her short story too as part of this festival.  The play is in Kannada and the exquisite selection of the stories will make you want more. With eight Jnanapeth Awards and stalwarts to choose from we had to read more than 120 short stories written between early 1930’s to 2011 to arrive at this unique bouquet. We sincerely hope that you will have a blast watching this as we have creating this performance piece for you. We enclose a small brief below of the stories to give you a better idea of the performances. We have interwoven six stories, running around the ...