Skip to main content

ವಾಣಿಯ ಸಮಸ್ಯೆ - ಕೊಡಗಿನ ಗೌರಮ್ಮ (ಮಿಸೆಸ್‌ ಬಿ.ಟಿ.ಜಿ. ಕೃಷ್ಣ)

ಈ ಕಥೆಯು, ಪ್ರಕಸಂ ಅಭಿನಯಿಸಿದ ಕಥಾಸಂಗಮ ನಾಟಕಕ್ಕಾಗಿ ಆಯ್ದುಕೊಂಡಿದ್ದು. ನಾಟಕದ ಪೂರ್ಣ ವಿವರಕ್ಕಾಗಿ - www.prakasamtrust.org/ks ನೋಡಿ.

ವಾಣಿಯ ಸಮಸ್ಯೆ 

* ಕೊಡಗಿನ ಗೌರಮ್ಮ (ಮಿಸೆಸ್‌ ಬಿ.ಟಿ.ಜಿ. ಕೃಷ್ಣ) 

ಇಂದು ಆ ದಿನ ಬೆಳಗ್ಗೆ ಎದ್ದು ಹೊರಗೆ ಬರುವಾಗ ಬಹಳ ವರ್ಷಗಳಿಂದ ಖಾಲಿಯಾಗಿದ್ದ ನೆರೆಮನೆಗೆ ಯಾರೋ ಒಕ್ಕಲು ಬಂದಿದ್ದಂತೆ ತೋರಿತು. ಮನೆಯ ಇದಿಯೊಂದು ಸಾಮಾನು ತುಂಬಿದ ಲಾರಿ ನಿಂತಿತ್ತು. ಒಳಗಿನಿಂದ ಮಾತು ಕೇಳಿಸುತ್ತಿತ್ತು. ನೋಡಿ ಐದಾರು ವರ್ಷಗಳಿಂದ ಖಾಲಿ ಬಿದ್ದಿದ್ದ ಆ ಮನೆಗೆ ಬಂದವರು ಯಾರು ಎಂದು ತಿಳಿದುಕೊಳ್ಳುವ ಕುತೂಹಲಕ್ಕಿಂತಲೂ ಹೆಚ್ಚಾಗಿ ಇಂದುಗೆ ಬೇಸರವಾಯ್ತು. 'ನೆರೆಮನೆ ಅಜ್ಜಿ ಹೋದರೆ ಕರು ಕಟ್ಟಲು ಸ್ಥಳವಾಯ್ತು' ಎನ್ನುವ ಸ್ವಭಾವ ಇಂದುವಿನದಲ್ಲವಾದರೂ ಆ ಮನೆಗೆ ಒಕ್ಕಲು ಬಂದುದರಿಂದ ಅವಳಿಗೆ ಸಂತೋಷಕ್ಕಿಂತ ವ್ಯಸನವೇ ಹೆಚ್ಚಾಯ್ತು ಎಂದರೆ ತಪ್ಪಾಗಲಾರದು. ಅವಳಿಗೆ ಹಾಗಾಗಲು ಕಾರಣವೂ ಇತ್ತು. 

ಇಂದು ಹುಟ್ಟುವ ಮೊದಲೇ ತಂದೆಯನ್ನೂ ಹುಟ್ಟುವಾಗ ತಾಯನ್ನೂ ಕಳೆದುಕೊಂಡು ದಾಯಾದಿಗಳ ಮನೆಯಲ್ಲಿ ಎಲ್ಲರಿಗೂ ಹೊರೆಯಾಗಿ ಬೆಳೆದವಳು. ಇಷ್ಟೇ ಸಾಲದು ಎಂದೇನೂ ಮದುವೆಯಾಗಿ ಆರು ತಿಂಗಳಾಗುವ ಮೊದಲೇ ವೈಧವ್ಯ ಬೇರೆ ಪ್ರಾಪ್ತವಾಗಿ ಹೋಗಿತ್ತು. ಅವಳೀಗ ವಾಸಿಸುತ್ತಿರುವ ಆ ಪುಟ್ಟ ಮನೆಯೇ ಅವಳಿಗೆ ಒಂದಾನೊಂದು ಕಾಲದಲ್ಲಿ ಮದುವೆಯಾಗಿತ್ತು ಎಂಬುದರ ಗುರುತು. ತಾನು ಬದುಕುವುದು ಅಸಂಭವ ಎಂದು ತಿಳಿದಾಗ ಅವಳ ಗಂಡ ಅವಳ ಹೆಸರಿಗೆ ಮಾಡಿಟ್ಟಿದ್ದ ಸ್ವಲ್ಪ ಹಣವೂ ಆ ಮನೆಯೂ ಸಿಕ್ಕಿ, ಇಂದುವಿನ ಜೀವನವೇನೋ ಇತರರ ಹಂಗಿಲ್ಲದೆ ಸುಸೂತ್ರವಾಗಿ ಸಾಗುತ್ತಿತ್ತು, 

ಆ ಮನೆ ಎಂದರೆ ಅವಳಿಗೆ ಬಲು ಪ್ರೀತಿ. ಅದನ್ನು ಸುಂದರವಾಗಿಟ್ಟುಕೊಳ್ಳುವುದೊಂದೇ ಅವಳ ಜೀವನದ ಗುರಿ, ತಾನು, ತನ್ನದು ಎಂಬುದಕ್ಕೆ ಎಡೆಯಿಲ್ಲದೆ ಬೆಳೆದು ಬೇಸತ್ತ ಅವಳಿಗೆ ಆ ಮನೆಯ ಮೇಲೆ ಅಷ್ಟೊಂದು ಪ್ರೀತಿ ಇದ್ದುದೇನೂ ಆಶ್ಚರ್ಯವಲ್ಲ. ಮತ್ತೆ ಅವಳ ಜೀವನದಲ್ಲಿ ಸ್ವಲ್ಪವಾದರೂ ಸುಖವನ್ನು ಕಂಡಿದ್ದರೆ ಅದೂ ಆ ಮನೆಯಲ್ಲಿಯೇ, ಅವನು ಸತ್ತುಹೋದರೆ ತನ್ನ ಜೀವನವೇ ಹಾಳಾಯ್ತು ಎಂಬ ತಿಳುವಳಿಕೆ ಬರುವ ಮೊದಲೇ ಅವಳ ಗಂಡ ಸತ್ತುಹೋಗಿದ್ದ. ಮದುವೆಯಲ್ಲವನ ಮುಖ ಕಂಡವಳು ಮತ್ತೊಮ್ಮೆ ನೋಡಿದ್ದು ಸತ್ತಮೇಲೇ. ಹಾಗೆ ನೋಡುವುದಾದರೆ ಅವನು ಸತ್ತಮೇಲೆಯೇ ಅವಳ ಜೀವನ ಕೊಂಚ ಸುಖಮಯವಾಯಿತೆನ್ನಬೇಕು. ಏಕೆಂದರೆ ಅವಳಿಗಾಗಿ ಅವನಿಟ್ಟಿದ್ದ ಧನದ ಲೋಭದಿಂದ ಮನೆಯವರ ಪ್ರೀತಿ ಅವಳ ಮೇಲೆ ಹೆಚ್ಚಾಯಿತು. ಆದರೆ ಇಂದು ಬುದ್ದಿ ಬಂದು ತಿಳಿದುಕೊಳ್ಳುವಷ್ಟಾದ ಮೇಲೆ ತಾನೇ ಬೇರೆಯಾಗಿ ಸ್ವತಂತ್ರವಾಗಿರಲು ಬಯಸಿದಳು. ಅವಳ ಮೇಲಲ್ಲದಿದ್ದರೂ ಅವಳ ಹಣದ ಮೇಲಿನ ಪ್ರೀತಿಯಿಂದ ಮನೆಯವರು 'ತರುಣಿಯಾದ ನೀನೊಬ್ಬಳೇ ಒಂದು ಮನೆಯಲ್ಲಿರುವುದು ಸರಿಯಲ್ಲ' ಎಂದು ಎಷ್ಟೋ ಹೇಳಿದರೂ ಇಂದು ಮಾತ್ರ ತನ್ನ ನಿಶ್ಚಯವನ್ನು ಬದಲಾಯಿಸಲಿಲ್ಲ. 

ಇದು ಆರು ವರ್ಷಗಳ ಹಿಂದಿನ ಮಾತು. ಆಗವಳಿಗೆ ಇಪ್ಪತ್ತು ವರ್ಷ ವಯಸ್ಸು. ಅವಳು ಊರು ಬಿಟ್ಟು ಆ ಮನೆಗೆ ಬರುವಾಗಲೇ ನೆರೆಮನೆ ಖಾಲಿಯಿತ್ತು. ಅಂದಿನಿಂದಿಂದಿನವರೆಗೂ ಇಂದುಗೆ ತನ್ನ ಮನೆಯ ಹಿತ್ತಲಷ್ಟೇ ಸ್ವತಂತ್ರದಿಂದ ನೆರೆಮನೆಯ ಹಿತ್ತಲಲ್ಲೂ ಹೋಗಿಬರುವುದು ವಾಡಿಕೆಯಾಗಿ ಹೋಗಿತ್ತು. ಕಾಲಕ್ರಮದಲ್ಲಿ ಮುರಿದ ಮಧ್ಯದ ಬೇಲಿಯನ್ನು ಸಹ ಕಟ್ಟಿಸುವ ಆವಶ್ಯಕತೆ ಅವಳಿಗೆ ತೋರಿಬರಲಿಲ್ಲ. 

ಅವಳದು ಏಕಾಂತವನ್ನು ಬಯಸುವ ಜೀವ, ಹುಟ್ಟಿದಂದಿನಿಂದ ತನ್ನವರು, ತನ್ನದು ಎಂಬುದಿಲ್ಲದೆ ಒಂಟಿಯಾಗಿ ಬೆಳೆದಿದ್ದ ಅವಳಿಗೆ ಸ್ವತಂತ್ರವಾದಮೇಲೂ ಬೇರೆಯವರ ಸಹವಾಸ, ಸ್ನೇಹ, ಪ್ರೀತಿಗಳು ಅಗತ್ಯವಾಗಿ ಕಾಣಬರಲಿಲ್ಲ. ಹಾಗೊಮ್ಮೆ ಅವಶ್ಯವೆಂದು ತೋರಿದ್ದರೂ ತಾನಾಗಿ ಇನ್ನೊಬ್ಬರ ಸ್ನೇಹವನ್ನು ಕೋರದಷ್ಟು ಸಂಕೋಚವುಳ್ಳ ಪ್ರಕೃತಿ ಅವಳದು. ಅದರಿಂದ ತಾನೇತಾನಾಗಿದ್ದ ಅವಳಿಗೆ ನೆರೆಮನೆಗೆ ಒಕ್ಕಲು ಬಂದಿರುವುದು ಎಂದು ತಿಳಿದಾಗ ಸಂತೋಷವಾಗದಿದ್ದುದು ಆಶ್ಚರ್ಯವಲ್ಲ. ಆದರೆ ಅವಳ ಸಂತೋಷವನ್ನೇನೂ ನೆರೆಮನೆಯ ಒಕ್ಕಲು ಹೊಂದಿಕೊಂಡಿರಲಿಲ್ಲ. ಅದು ಅವಳಿಗೂ ತಿಳಿದಿದ್ದರೂ 'ಬಂದರಲ್ಲಾ ಎಂದಾಗದೆ ಮಾತ್ರ ಹೋಗಲಿಲ್ಲ. ಇನ್ನು ಮುರಿದ ಬೇಲಿಯನ್ನು ಕಟ್ಟಿಸದಿದ್ದರೆ ತನ್ನ ಏಕಾಂತಕ್ಕೆ ಭಂಗಬರುವುದೆಂದುಕೊಂಡು ಇಂದು ಒಳಗೆ ಹೋದವಳು ಆ ದಿನ ಮತ್ತೆ ಹಿತ್ತಲ ಕಡೆಗೆ ಹೋಗಲಿಲ್ಲ. 

ಮರುದಿನ ಇಂದು ಮುರಿದ ಬೇಲಿಯನ್ನು ಸರಿಮಾಡಿಸುತ್ತಿದ್ದಾಗ ನೆರೆಮನೆಯ ಹಿತ್ತಲ ಬಾವಿಯ ಹತ್ತರ ತನ್ನ ಪ್ರಾಯದ ಹೆಂಗಸೊಬ್ಬಳನ್ನು ನೋಡಿದಳು. ಅವಳೂ ಇವಳನ್ನು ನೋಡಿದಳು, ನೋಡಿ ಮುಗುಳು ನಕ್ಕಳು. ಆ ನಗುವಿನ ಪ್ರತಿಬಿಂಬ ಇಂದುವಿನ ಮೋರೆಯಲ್ಲೂ ಮೂಡಿತು. ಸರಿ, ಮತ್ತೆರಡು ದಿನಗಳ ಕೆಲಸವಿದ್ದರೂ ಆ ದಿನದ ತರುವಾಯ ಬೇಲಿಯ ಕೆಲಸವು ಮುಂದುವರಿಯಲಿಲ್ಲ. 

ಈ ರೀತಿ ನಗುವಿನಿಂದ ಮೊದಲಾದ ಇಂದು ಮತ್ತು ನೆರಮನೆಯ ವಾಣಿಯ ಪರಿಚಯವು ಒಂದು ವಾರ ತುಂಬುವುದರೊಳಗೆ ಸ್ನೇಹದ ದಾರಿ ಹಿಡಿದಿತ್ತು. ಯಾರ ಸ್ನೇಹವನ್ನೂ ಬಯಸದ ಇಂದುಗೇ ವಾಣಿಯ ವಿಷಯಕ್ಕೆ ತನ್ನಲ್ಲಿ ಮೂಡಿದ್ದ ಆದರವನ್ನು ನೋಡಿ ಆಶ್ಚರ್ಯವಾಗುತ್ತಿತ್ತು. ವಾಣಿಯೇನೋ ಊರಿಗೆ ಹೊಸಬಳು. ಯಾರೊಬ್ಬರ ಗುರುತು ಪರಿಚಯವೂ ಇಲ್ಲ. ದಿನ ಬೆಳಗಾದರೆ ನೆರೆಮನೆಯ ಇಂದುವಿನ ಮುಖ ಕಾಣುವುದು. ವಾಣಿಗೆ ಅವಳ ಪರಿಚಯ ಕ್ರಮವಾಗಿ ಸ್ನೇಹವಾದುದು ಆಶ್ಚರ್ಯದ ಮಾತಲ್ಲ. ಆದರೆ ಅಷ್ಟೇ ಸಹಜ ಸ್ನೇಹದ ಸುಳಿವನ್ನೇ ಅರಿಯದ ತನ್ನ ಹೃದಯದಲ್ಲೂ ಆ ಸ್ನೇಹ ಪ್ರತಿಬಿಂಬಿಸುವುದೆಂದು ಮಾತ್ರ ಇಂದುಗೆ ತಿಳಿಯದು. 

ಆ ಮನೆಯಲ್ಲಿ ವಾಣಿ ಮತ್ತು ಅವಳ ಗಂಡ ರತ್ನ ಇಬ್ಬರೇ. ರತ್ನ ಆ ಊರಿಗೆ ಹೊಸದಾಗಿ ವರ್ಗವಾಗಿ ಬಂದ ಡಾಕ್ಟರ್, ಊರಿಗೆ ಒಬ್ಬನೇ ಡಾಕ್ಟರ್ ಆದುದರಿಂದ ಊಟ ತಿಂಡಿಗಳಿಗೆ ಸಹ ಬಿಡುವಿಲ್ಲದಷ್ಟು ಕೆಲಸ ಅವನಿಗೆ, ವಾಣಿಗಂತೂ ಮನೆಯೊಳಗೊಬ್ಬಳೇ ಇರುವುದಕ್ಕೆ ಬೇಸರ. ಅದರಿಂದ ಅವಳ ಮುಕ್ಕಾಲು ಸಮಯವೆಲ್ಲಾ ಇಂದುವಿನ ಮನೆಯಲ್ಲೇ ಕಳೆಯುತ್ತಿತ್ತು. ಇಂದುವೂ ಒಂದೆರಡು ಸಾರಿ ಅವಳ ಮನೆಗೆ ಹೋಗಿದ್ದಳು. 

ಇಂದು ಮೊಟ್ಟಮೊದಲು ವಾಣಿಯ ಮನೆಗೆ ಹೋದಾಗ ಬಟ್ಟೆ ಬರೆ, ಪಾತ್ರ-ಪದಾರ್ಥಗಳೆಲ್ಲಾ ಮನೆತುಂಬ ಅಸ್ತವ್ಯಸ್ತವಾಗಿ ಬಿದ್ದಿದ್ದುವು. ವಾಣಿ ಏನೋ 'ಹೊಸದಾಗಿ ಬಂದುದರಿಂದ ಮನೆಯನ್ನಿನ್ನೂ ವ್ಯವಸ್ಥಿತ ರೀತಿಗೆ ತರಲು ಸಮಯವಾಗಲಿಲ್ಲ ಎಂದು ಹೇಳಿದರೂ ತನ್ನ ಮನೆಯನ್ನು ಸದಾ ಸುವ್ಯವಸ್ಥಿತ ರೀತಿಯಲ್ಲಿಟ್ಟುಕೊಂಡಿದ್ದ ಇಂದುಗೆ 'ಬಂದು ಹದಿನೈದು ದಿನಗಳಾದರೂ ಇನ್ನೂ ಸಮಯವಾಗಿಲ್ಲವೇ ?' ಎಂದು ಆಶ್ಚರ್ಯ. ಆ ದಿನ ಅವುಗಳನ್ನೆಲ್ಲಾ ಸರಿಮಾಡಿಡಲು ವಾಣಿಗೆ ನೆರವಾದಳು. ಮಧ್ಯಾಹ್ನ ಎರಡು ಗಂಟೆಗೆ ಕೆಲಸ ಸುರು ಮಾಡಿದ್ದರೂ ಎಲ್ಲವನ್ನೂ ಸರಿಯಾಗಿ ಮಾಡುವಾಗ ಕತ್ತಲಾಗುವ ಸಮಯವಾಗಿತ್ತು. ಅಂತೂ ಎಲ್ಲಾ ಮುಗಿಯುವಾಗ ಮನೆಯು ಸ್ವಚ್ಛವಾಗಿ, ಸುಂದರವಾಗಿ ತೋರಿತು. ಎಂದು 

ಈ ಕೆಲಸದಲ್ಲಿ ವಾಣಿಗೆ ಇಂದು ನೆರವಾದಳು ಎನ್ನುವುದಕ್ಕಿಂತ ಇಂದುಗ ವಾಣಿ ನೆರವಾದಳು ಎಂದರೆ ಸರಿಯಾಗಬಹುದು. ಮುಕ್ಕಾಲು ಕೆಲಸ ಮಾಡಿದವಳು ಇಂದು, ಯಾವ ಯಾವ ಪದಾರ್ಥವನ್ನು ಎಲ್ಲೆಲ್ಲಿ ಇಡಬೇಕು; ಹೇಗೆ ಇಟ್ಟರೆ ಹೆಚ್ಚು ಸುಂದರವಾಗಿ ತೋರಬಹುದು 

ಆಲೋಚಿಸಿ ಸರಿಮಾಡಿ ಅಣಿಯಾಗಿಟ್ಟವಳು ಇಂದು ಇಂದು ಹೊರಲಾರದ ದೊಡ್ಡದೊಡ್ಡ ವಸ್ತುಗಳನ್ನು ಎತ್ತಿಡಲು ಸಹಾಯ ಮಾಡುವುದು ಅಥವಾ ಅವಳು ಹೇಳಿದ ಸಾಮಾನುಗಳನ್ನು ತಂದು ಕೊಡುವುದು ಇವು ವಾಣಿ ಮಾಡಿದ ಕೆಲಸ, ಅಂತೂ ಅವರ ಕೆಲಸ ಮುಗಿಯುವಾಗ ಮನೆಯೊಂದು ಹೊಸ ಕಳೆ ತಳೆದಿತ್ತು. ವಾಣಿಗಂತೂ ರೂಪು ಬದಲಾದ ತನ್ನ ಮನೆಯನ್ನು ನೋಡಿ ಹಿಡಿಸಲಾರದಷ್ಟು ಆಶ್ಚರ್ಯ-ಆನಂದ. 

ಅವಳದು ಜನ್ಮತಃ ಉದಾಸೀನ ಪ್ರವೃತ್ತಿ, ಯಾವ ಕೆಲಸವನ್ನಾದರೂ ನಾಳೆ ಮಾಡಿದರಾಯ್ತು ಎನ್ನುವ ಪ್ರಕೃತಿ. ನಾಳೆ ನಾಳೆ ಎಂದು ಯಾವಾಗಲೂ ಅವಳ ಕೆಲಸಗಳು ನಾಳೆಗಾಗಿ ಬಿದ್ದಿರುತ್ತಿದ್ದುದು. ಅದರಿಂದ ಸಹಜವಾಗಿಯೇ ಅವಳ ಮನೆ ಎಂದೂ ಅಂದಿನಷ್ಟು ಸುಂದರವಾಗಿ ತೋರಿರಲಿಲ್ಲ. 

ಆ ದಿನ ಸಾಯಂಕಾಲ ರತ್ನ ಸ್ವಲ್ಪ ಬೇಗನೆ ಬಂದ. ಅವನಿಗೂ ತನ್ನ ಮನೆಯ ಸುವ್ಯವಸ್ಥಿತ ರೀತಿಯನ್ನು ನೋಡಿ ಬಹಳ ಆಶ್ಚರ್ಯವಾಗದಿರಲಿಲ್ಲ. ಆದರೆ ಕಾಫಿ ಕುಡಿದು ಮುಗಿಯುವ ಮೊದಲೇ ವಾಣಿಯ ಬಾಯಿಂದ ಮನೆಯ ಆ ರೂಪಿಗೆ ಕಾರಣಳಾದವಳು ನೆರೆಮನೆಯ ಇಂದು ಎಂದು ತಿಳಿಯಿತು. ತಿಳಿದು ನನ್ನ ವಾಣಿಯೂ ಗೃಹಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ವಹಿಸುವಂತಾಗಿದ್ದರೆ' ಎಂದೆನ್ನಿಸಿತವನಿಗೆ. ತನ್ನ ಬಯಕೆಗಳು ಪೂರ್ತಿಯಾಗುವುದು ತಾನು ಬಯಸಿದಷ್ಟು ಸುಲಭವಲ್ಲ ಎಂಬುದು ರತ್ನನ ಐದು ವರ್ಷಗಳ ದಾಂಪತ್ಯ ಜೀವನದ ಅನುಭವ. ಆದರೆ ಇನ್ನೂ ರತ್ನನಿಗೆ 'ಹಾಗಾಗಿದ್ದರೆ-ಹೀಗಾಗಿದ್ದರೆ' ಎಂದು ಅಂದುಕೊಳ್ಳದಿರುವಷ್ಟು ನಿರಾಸೆಯಾಗಿರಲಿಲ್ಲ. 

ರತ್ನ ಕೆಲಸ ತೀರಿಸಿ ದಣಿದು ಬರುವಾಗ ವಾಣಿ ಇಂದುವಿನ ಮನೆಯಲ್ಲಿ ಹರಟೆಹೊಡೆಯುತ್ತ ಕೂತುಬಿಡುತ್ತಿದ್ದಳು. ರತ್ನ ಬಂದಮೇಲೆ ಓಡಿ ಹೋಗಿ ಮತ್ತೆ ಕಾಫಿ ಮಾಡಬೇಕು. ವಾಣಿಯ ಕಾಫಿಯಾಗುವುದರೊಳಗೆ ರತ್ನನನ್ನು ಕೂಗಲು ಯಾರಾದರೂ ಬಂದೇ ಬರುವರು. ಎಷ್ಟೋ ಸಾರಿ ಅವನು ಏನನ್ನೂ ತೆಗೆದುಕೊಳ್ಳದೆ ಹಾಗೆಯೇ ಹೊರಟುಹೋಗಿಬಿಡ ಬೇಕಾಗುತ್ತಿತ್ತು. ಆಮೇಲೆ ಸ್ವಲ್ಪ ಹೊತ್ತು 'ಅಯ್ಯೋ, ಬೇಗನೆ ಕಾಫಿ ತಿಂಡಿ ಮಾಡಿಟ್ಟಿರಬೇಕಿತ್ತು ಎಂದು ವಾಣಿ ನೊಂದುಕೊಳ್ಳುತ್ತಿದ್ದಳೇನೋ ನಿಜ; ಆದರೆ ಅದು ಸ್ವಲ್ಪ ಹೊತ್ತು ಮಾತ್ರ, ಮರುದಿನ ಯಥಾ ಪ್ರಕಾರ.... ರತ್ನನ ಬಟ್ಟೆಬರೆಗಳೂ ಹಾಗೆಯೇ ಅವನಿಗೆ ಬೇಕಾದಷ್ಟು ಬಟ್ಟೆಬರೆಗಳಿದ್ದರೂ ಬೇಕಾದಾಗ ಒಂದು ಟೈ ಸಹ ಸರಿಯಾಗಿ ಸಿಕ್ಕುವುದು ಕಷ್ಟವಾಗುತ್ತಿತ್ತು. 

ಮದುವೆಯಾದ ಹೊಸತರಲ್ಲಿ, ರತ್ನನಿಗೆ ನವಪ್ರಣಯದ ಭರದಲ್ಲಿ ವಾಣಿಯ ಈ ಕುಂದುಕೊರತೆಗಳೊಂದೂ ತಿಳಿಯದಿದ್ದರೂ ದಿನಗಳು ಕಳೆದಂತೆ ಅವನಿಗೆ ನನ್ನ ವಾಣಿಯು ಹೀಗೇಕೆ?' ಎಂದಾಗದೆ ಹೋಗುತ್ತಿರಲಿಲ್ಲ. ಆದರೆ ಅವಳ ಪಶ್ಚಾತ್ತಾಪದಿಂದ ಕೂಡಿದ ಮುಖ, ತುಂಬಿದ ಕಣ್ಣುಗಳನ್ನು ನೋಡುವಾಗ ಅವನಿಗೆ ಏನನ್ನುವುದಕ್ಕೂ ತೋರದೆ ಅವಳನ್ನು ಸಂತೈಸಿ, ನಗಿಸಿ, ನಕ್ಕು ನಲಿಯುತ್ತಿದ್ದ. ಇನ್ನು ಮುಂದೆ ಹೀಗೆ ಮಾಡಬೇಡವೆಂದು ಹೇಳಿ ಸ್ವಲ್ಪ ಕೋಪಿಸಿ ವಾಣಿಗೆ ಬುದ್ದಿ ಕಲಿಸಬೇಕೆನ್ನುವ ಅವನ ಪ್ರಯತ್ನಗಳೆಲ್ಲಾ ಇದೇ ರೀತಿಯ ಅಂತ್ಯಗಳಾಗುತ್ತಿದ್ದುವು. 

ದಿನಕಳೆದಂತೆ ಅವರವರ ಸ್ನೇಹ ಬೆಳೆದಂತೆ ವಾಣಿಯ ಈ ತರದ ಅಲಕ್ಷತನ ಇಂದುಗೆ ತಿಳಿಯದಿರಲಿಲ್ಲ. ಅವಳಿಗೆ ತಿಳಿಯದಿದ್ದರೂ ಹೀಗೇನಾದರೂ ನಡೆದಾಗಲೆಲ್ಲ ವಾಣಿ ಇಂದುವಿನೆದುರು ತಾನೇ ಹೇಳುತ್ತಿದ್ದಳು. ತನ್ನ ತಿಳಿಗೇಡಿತನವನ್ನು ಹಳಿದುಕೊಳ್ಳುತ್ತಿದ್ದಳು. ಮೊದ ಮೊದಲು ಇಂದು ವಾಣಿಯನ್ನು ಸಮಾಧಾನಪಡಿಸುತ್ತಿದ್ದಳು. ಆದರೆ, ಯಾವಾಗಲೂ ಅವಳ ಪ್ರಕೃತಿಯೇ ಹೀಗೆಂದು ತಿಳಿದ ಮೇಲೆ ಮಾತ್ರ ಇಂದುಗ 'ರತ್ನನಂಥ ಗಂಡನನ್ನು ಪಡೆದೂ ಅವನನ್ನು ಸುಖದಲ್ಲಿಟ್ಟಿರಲಾರಳಲ್ಲ ಈ ವಾಣಿ!' ಎಂದು ಆಶ್ಚರ್ಯ. 'ತನ್ನ ಪತಿಯಾಗಿದ್ದರೆ ತಾನು ಹೇಗೆ ನಡೆದುಕೊಳ್ಳುತ್ತಿದ್ದೆ' ಎಂದು ಒಂದು ನಿಟ್ಟುಸಿರು. ಮತ್ತೆ 'ಥ, ಹುಚ್ಚುಯೋಚನೆ' ಎಂದೊಂದು ಮೋಡಮುಚ್ಚಿದ ನಗು. 

ಒಂದು ದಿನ ಬೆಳಗ್ಗೆ ಸುಮಾರು ಹನ್ನೊಂದು ಗಂಟೆಯ ಹೊತ್ತಿನಲ್ಲಿ ಇಂದು ಅಡಿಗೆ ಮಾಡುತ್ತಿರುವಾಗ ವಾಣಿ ಬಂದಳು. ಇಂದುವಿನ ಮನೆಗೆ ವಾಣಿ ಬರುವುದಕ್ಕೆ ಸಮಯಾಸಮಯಗಳ ಕಟ್ಟುಗಳಿರಲಿಲ್ಲ, ಬೆಳಗ್ಗೆ ಎದ್ದಂದಿನಿಂದ ರಾತ್ರಿ ಮಲಗುವ ತನಕ ಆ ಮನೆಯಿಂದ ಈ ಮನೆಗೆ, ಈ ಮನೆಯಿಂದ ಆ ಮನೆಗೆ ಓಡಾಡುವುದು ಅವಳ ಪದ್ದತಿ, ಅವಳು ಬಂದು ಹೋಗುವುದರಲ್ಲಿ ವಿಶೇಷವೇನೂ ಇಲ್ಲ. ಆದರೆ ಆ ದಿನದ ವಾಣಿಯ ಬರುವು ಇಂದುವಿನ ಶಾಂತಜೀವನ ಪ್ರವಾಹವನ್ನು ಅಲ್ಲೋಲ ಕಲ್ಲೋಲ ಮಾಡಲು ಕಾರಣವಾಯ್ತು. ವಾಣಿ ಬಂದುದು ಹೆಚ್ಚಿನ ಕೆಲಸಕ್ಕೇನೂ ಅಲ್ಲ. ಸಾರಿಗೆ ಬೇಳೆ ಬೇಯಲು ಹಾಕಿ ಅದು ಬೇಯುವತನಕ ಸುಮ್ಮನೆ ಕೂತಿರಬೇಕೇಕೆಂದು ಇಂದುವಿನ ಮನೆಗೆ ಹರಟೆ ಹೊಡೆಯಲು ಬಂದಿದ್ದಳಷ್ಟೆ. 

ಮಧ್ಯಾಹ್ನದ ಮೇಲೆ ತುಂಬಾ ಕೆಲಸವಿದ್ದ ರತ್ನ, ಬೇಗನೆ ಊಟ ತೀರಿಸಿ ಹೋಗಬೇಕೆಂದು ಆ ದಿನ ಬೇಗನೆ ಮನೆಗೆ ಬಂದ. ಮನೆಯಲ್ಲಿ ವಾಣಿ ಇಲ್ಲ- ಒಂದೆರಡು ಬಾರಿ ಕೂಗಿದ. ಪ್ರತ್ಯುತ್ತರವೂ ಇಲ್ಲ. ಕೊನೆಗೆ ಹಿತ್ತಲಲ್ಲಿರಬಹುದೇನೋ ಎಂದು ಬಂದು ನೋಡುವಾಗ ಇಂದುವಿನ ಮನೆಯಿಂದ ವಾಣಿಯ ಮಾತು ಕೇಳಿಸಿತು. ಮಧ್ಯಾಹ್ನದ ವೇಳೆಯಲ್ಲಿ ಮಾಡುವ ಕೆಲಸ ಬಿಟ್ಟು ನೆರೆಮನೆಗೆ ಹೋಗಿ ಸಮಯ ಕಳೆಯುತ್ತಿರುವಳಲ್ಲ ಎಂದು ಸ್ವಲ್ಪ ಕೋಪವೂ ಬಂತು. 'ವಾಣಿ' ಎಂದು ಸ್ವಲ್ಪ ಗಟ್ಟಿಯಾಗಿಯೇ ಕೂಗಿದ. ಮಾತಿನ ಸಂಭ್ರಮದಲ್ಲಿ ಅವಳಿಗದು ಕೇಳಲಿಲ್ಲ. ಅವಳ ಮಾತಿನ ಗಲಾಟೆಯಲ್ಲಿ ಇಂದುಗೂ ಕೇಳಿಸುವಂತಿರಲಿಲ್ಲ. ಆದುದರಿಂದ ಮಾತಿನಲ್ಲಿ ಮುಳುಗಿದ್ದ ಅವರಿಗೆ ರತ್ನ ಹಿತ್ತಲ ಬೇಲಿಯ ಹತ್ತಿರ ಬಂದು ಪುನಃ ಜೋರಾಗಿ 'ವಾಣೀ' ಎನ್ನುವಾಗ ತುಂಬ ಗಾಬರಿಯಾಯ್ತು. ವಾಣಿಯಂತೂ 'ಅಯ್ಯೋ ಇಂದೂ, ಇನ್ನೂ ಅಡಿಗೆ ಆಗ್ತಿಲ್ಲ' ಎಂದು ಅವಸರದಿಂದ ಹೊರಗೆ ಬಂದಳು. ಇಂದುವೂ ಅವಳನ್ನು ಹಿಂಬಾಲಿಸಿ ಬಾಗಿಲ ಹತ್ತಿರ ಬರುವಾಗ ಬೇಲಿಯ ಹತ್ತಿರ ನಿಂತಿದ್ದ ದಣಿದ ರತ್ನನನ್ನು ನೋಡಿದಳು. ವಾಣಿ 'ಎಷ್ಟೊತ್ತಾಯ್ತು ಬಂದೂ, ಈಗ್ಲೆ ಆಸ್ಪತ್ರೆಗೆ ಮತ್ತೆ ಹೋಗೋಕೇ ?' ಎಂದು ಕೇಳುತ್ತಿದ್ದಳು. ಇಂದು ಅವಳ ಮಾತುಗಳನ್ನು ಕೇಳಿ ರತ್ನನಿಗೆ ಪುನಃ ಉಪವಾಸವ್ರತ ಎಂದು ತಿಳಿದುಕೊಂಡಳು. 

ರತ್ನನಿಗೇನೋ ಹಿಂದೆ ಅನೇಕ ಸಾರಿ ಈ ತರದ ಅನುಭವಗಳಾಗಿದ್ದರೂ ಇಂದುವಿಗೆ ಆಗಲೇ ಅದರ ಖುದ್ದಾದ ಅನುಭವ, ತಾನು ವಾಣಿಯ ಸಮಯವನ್ನು ಹಾಳುಹರಟೆಯಲ್ಲುಪಯೋಗಿಸಲು ಸಹಾಯಕಳಾದೆನಲ್ಲಾ ಎಂದು ಬಹಳ ಬೇಸರವೂ ಆಯ್ತು, ಬಾಗಿಲ ಸಂದಿನಿಂದ ದಣಿದು ಬೆಂಡಾಗಿದ್ದ ರತ್ನನನ್ನು ನೋಡುತ್ತಿದ್ದಂತೆ ಮನಸ್ಸಿನಲ್ಲಿ ಈ ಭಾವನೆಗಳು ಮೂಡುತ್ತಿದ್ದುವು. ಮತ್ತೆ ಎಂದೂ ಇಲ್ಲದ ಏನೇನೋ ಯೋಚನೆಗಳು ಒಂದರ ಮೇಲೊಂದಾಗಿ ಬರತೊಡಗಿದುವು. ಅವುಗಳನ್ನೇ ಹಿಂಬಾಲಿಸುವಂತೆ ನಿಡಿದಾದ ನಿಟ್ಟುಸಿರೊಂದು ಹೊರಬಿತ್ತು. ಕಣ್ಣೀರ ಕಾಲುವೆಯೊಡೆಯಲು ಇಷ್ಟೇ ಸಾಕಾಗಿತ್ತು. 'ಅಯ್ಯೋ ದೇವರೇ' ಎಂದು ಉಕ್ಕುತ್ತಿದ್ದ ಕಣ್ಣೀರನ್ನು ಸೆರಗಿನಿಂದ ಒರಸುತ್ತಾ ಒಳಗೆ ಬಂದಳು. ಅಷ್ಟು ಹೊತ್ತಿಗೆ ವಾಣಿರತ್ನರೂ ತಮ್ಮನೆಯ ಜಗಲಿ ತಲುಪಿದ್ದರು. 

ಇಂದು ಒಳಗೆ ಬಂದಳು. ಒಂದೇ ಒಂದು ಗಳಿಗೆಯ ಹಿಂದೆ ಅವಳ ಜೀವನದಲ್ಲಿ ಶಾಂತಿಯಿತ್ತು ಸಂತೋಷವಿತ್ತುಏನೋ ಒಂದು ತರಹದ ತೃಪ್ತಿಯೂ ಇತ್ತು. ಮತ್ತೆ ತನ್ನ ಮನೆ, ಅದರ ಸೌಂದರ್ಯ ಸ್ವಚ್ಛತೆಗಳಿಗಾಗಿ ಅಭಿಮಾನವಿತ್ತು. ಅದೇಕೋ-ಆ ಒಂದು ಗಳಿಗೆಯ ಹಿಂದಿದ್ದ ಅವಳ ಆ ಆನಂದ, ಅಭಿಮಾನ, ಶಾಂತಿ, ತೃಪ್ತಿ ಎಲ್ಲಾ ಇಂದು ಒಳಗೆ ಬರುವಾಗ ಮಾಯವಾಗಿದ್ದುವು. ಬದಲಾಗಿ ಅವುಗಳ ಸ್ಥಾನವನ್ನು ಹಿಂದೆಂದೂ ಇಂದುವನ್ನು ಬಾಧಿಸದ ಪ್ರಶ್ನೆಗಳು ಬಂದು ಆವರಿಸಿದ್ದುವು. 'ವಾಣಿಗೆ ಯಾವುದರ ಬೆಲೆಯನ್ನೂ ಅರಿಯದ ವಾಣಿಗೆ ಎಲ್ಲವನ್ನೂ ಕೊಟ್ಟ ದೇವರು ತನ್ನ ಜೀವನವನ್ನೇಕೆ ಅಂಧಕಾರಮಯವನ್ನಾಗಿ ಮಾಡಿದ?' ಎಂಬುದು ಎಲ್ಲದುದಕ್ಕಿಂತಲೂ ಅವಳಿಗೆ ಬಲು ದೊಡ್ಡದಾದ ಪ್ರಶ್ನೆಯಾಗಿ ತೋರಿತು. ಎಷ್ಟು ಯೋಚಿಸಿದರೂ ಪ್ರತ್ಯುತ್ತರ ದೊರೆಯದ ಈ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುವುದರಲ್ಲೇ ತಲ್ಲೀನಳಾದ ಇಂದು ಆ ದಿನ ಸಾಯಂಕಾಲ ಪುನಃ ವಾಣಿ ಬರುವತನಕವೂ ಕೂತಲ್ಲಿಂದ ಎದ್ದಿರಲಿಲ್ಲ. ಮಾಡಿಟ್ಟಿದ್ದ ಅಡಿಗೆಯೂ ಹಾಗೆಯೇ ಇತ್ತು. 

ವಾಣಿಯ ದೀನ ಮುಖಮುದ್ರೆಯನ್ನು ನೋಡಿ ಹಿಂದೆ ಮರುಕಗೊಳ್ಳುತ್ತಿದ್ದ ಇಂದುಗೆ ಆ ದಿನ ಅವಳ ಅಳುಮೋರೆಯನ್ನು ನೋಡಿ ಸ್ವಲ್ಪ ಸಂತೋಷವೇ ಆಯಿತು. ದೇವರು ತನಗೊಬ್ಬಳಿಗೆಂದೇ ದುಃಖವನ್ನು ಮೀಸಲಾಗಿರಿಸಬೇಕೇಕೆ ? ವಾಣಿಗೂ ಅದರ ರುಚಿ ಕೊಂಚ ಗೊತ್ತಾಗಲಿ ಎಂದು ಮನದಲ್ಲೇ ಹೇಳಿಕೊಂಡಳು. ತಾನು ಆ ರೀತಿ ಬಯಸುವುದು ಸ್ವಾರ್ಥವೆಂದೂ ತನ್ನ ದುಃಖಕ್ಕೆ ಕಾರಣಳು ವಾಣಿ ಅಲ್ಲವೆಂದೂ ಇಂದುಗೆ ತಿಳಿದಿದ್ದರೂ ವಾಣಿಯ ಬಾಡಿದ ಮುಖವು ಅವಳಲ್ಲಿ ಕರುಣೆಯನ್ನು ಹುಟ್ಟಿಸಲಿಲ್ಲ. ವಾಣಿ ಅಳುತ್ತಾ 'ಎಂದೂ ಏನೂ ಅನ್ನದಿದ್ದವರು ಕೋಪಿಸಿಕೊಂಡು ಹೊರಟುಹೋದರು' ಎಂದು ಹೇಳುವಾಗ ಇಂದುಗೆ ಒಂದು ತರದ ಆನಂದವೇ ಆಯ್ತು. ಆದರೆ ಮರುಕ್ಷಣದಲ್ಲಿ ಆ ರೀತಿ ಸಂತೋಷಪಡುವುದು ತಪ್ಪು ಎಂದು, ಎಂದೂ ಆ ತರದ ಭಾವನೆಗಳಿಗೆ ಎಡೆಕೊಡದಿದ್ದ ಇಂದುವಿನ ಮನವು ಎಚ್ಚರಿಸಿದಾಗ ಅವಳಿಗೆ ತನ್ನ ನೀಚಭಾವನೆಗಳಿಗಾಗಿ ನಾಚಿಕೆಯಾಯ್ತು. ಆ ಭಾವನೆಗಳಿಗೆ ಎಡೆಕೊಟ್ಟ ತಪ್ಪಿನ ಪ್ರಾಯಶ್ಚಿತ್ತ ಸ್ವರೂಪವಾಗಿ ವಾಣಿಯನ್ನು ಸಂತೈಸಿ ಅವಳ ಕೆಲಸಕ್ಕೆ ನೆರವಾದಳು. 

ಎಲ್ಲ ಕೆಲಸಗಳನ್ನು ತೀರಿಸಿ ಇಂದು ತನ್ನ ಮನೆಗೆ ಹಿಂತಿರುಗುವುದೂ ರತ್ನ ತನ್ನ ಮನೆಗೆ ಬರುವುದೂ ಸರಿಯಾಯ್ತು. ಅವನಿಗೂ ಮಧ್ಯಾಹ್ನದಿಂದ ನೆಮ್ಮದಿ ಇಲ್ಲ. ಎಂದೂ ವಾಣಿಯೊಡನೆ ಕೋಪಿಸಿಕೊಂಡವನಲ್ಲ. ಬಹಳ ದಿನಗಳಿಂದ ತಡೆದಿದ್ದ ಅವನ ಸಮಾಧಾನವು ಆ ದಿನ ಹಸಿವಿನ ಭರದಲ್ಲಿ ತಡೆಯಲಾರದೆ ಕೋಪಕ್ಕೆ ಎಡೆಕೊಟ್ಟಿತ್ತು. ಕೋಪ ಇಳಿಯುತ್ತ ಬಂದಂತೆ ಅವನಿಗೆ ತನ್ನ ವರ್ತನೆಗಾಗಿ ಸ್ವಲ್ಪ ನಾಚಿಕೆಯಾಯ್ತು. ವಾಣಿ ಎಷ್ಟು ನೊಂದುಕೊಂಡಿರುವಳೋ ಎಂದು ಕ್ಲಬ್ಬಿಗೆ ಸಹ ಹೋಗದ ಮನೆಗೇ ನೇರವಾಗಿ ಬಂದಿದ್ದ. ಆದರೆ ಅವನೆಣಿಸಿದಂತೆ ವಾಣಿ ದೀಪವನ್ನು ಸಹ ಹತ್ತಿಸದೆ ಅಳುತ್ತ ಮಲಗಿರಲಿಲ್ಲ. ಅವನ ಮನೆ ಇಂದುವಿನ ಕೈವಾಡದಿಂದ ನೂತನ ರೂಪ ತಳೆದು ದೀಪದ ಬೆಳಕಿನಲ್ಲಿ ಬೆಳಗುತ್ತಿತ್ತು. ನಗುಮುಖದ ವಾಣಿ ಅವನ ಬರುವನ್ನೇ ಇದಿರು ನೋಡುತ್ತ ಅಡಿಗೆಯನ್ನು ಸಿದ್ಧಪಡಿಸಿ ಕಾಯುತ್ತಿದ್ದಳು. 

ಆದರೆ ಇದೆಲ್ಲಾ ನೋಡಿ ಅವನಿಗಾದ ಆಶ್ಚರ್ಯ-ಆನಂದ ಕೇವಲ ಒಂದೇ ಒಂದು ಗಳಿಗೆ ಮಾತ್ರ. ವಾಣಿಯು ಬಡಿಸುತ್ತಿದ್ದ ಅಡಿಗೆಯನ್ನು ಊಟ ಮಾಡುತ್ತಿರುವಾಗಲೇ ನೆರೆಮನೆಯ ಇಂದುವಿನ ಕೃತಿ ಇದು ಎಂದವನಿಗೆ ತಿಳಿಯದೆ ಹೋಗಲಿಲ್ಲ. ತಿಳಿದು ಹಿಂದಿನಂತೆ 'ನನ್ನ ವಾಣಿಯೂ ಹೀಗೆಯೇ ಕಾರ್ಯ ಕುಶಲೆಯಾಗಿದ್ದರೆ' ಎಂದೆಂದುಕೊಳ್ಳುವ ಬದಲು ತಾನೆಂದೂ ನೋಡದ ಇಂದುವಿನ ರೂಪವನ್ನು ಕಲ್ಪಿಸತೊಡಗಿದ. ಅವನನ್ನು ಮೆಚ್ಚಿಸಬೇಕೆಂದು ಆ ದಿನ ವಾಣಿಯು ಆಡಿದ ಮಾತುಗಳೆಲ್ಲಾ ಅವನಿಗೆ ಬಲು ದೂರದಿಂದ ಕೇಳಿಸಿದಂತಿದ್ದುವು. ಅವನ ಅನ್ಯಮನಸ್ಕತೆಯನ್ನು ಕಂಡು ವಾಣಿ 'ಬೆಳಗಿನಿಂದಲೂ ಊಟವಿಲ್ಲದೆ ಬಹಳ ದಣಿದಿರುವರು' ಎಂದು ಮನದಲ್ಲಿಯೇ ಹಲುಬಿದಳು. ಇನ್ನು ಮುಂದೆಂದೂ ಹೀಗಾಗಗೊಡುವುದಿಲ್ಲ' ಎಂದು ಪ್ರತಿಜ್ಞೆಯನ್ನು ಮಾಡಿಕೊಂಡಳು. ಹಿಂದೆಷ್ಟೋ ಸಾರಿ ವಾಣಿ ಇದೇ ರೀತಿಯ ಪ್ರತಿಜ್ಞೆಗಳನ್ನು ಮಾಡಿಕೊಂಡಿದ್ದರೂ ಅವುಗಳನ್ನೆಂದೂ ನೆರವೇರಿಸಲಿಲ್ಲ. ಆದರೆ ಈ ಸಾರಿ ದಿನಬೆಳಗಾದರೆ ಇಂದು ಕೆಲಸಕ್ಕೆ ನೆರವಾಗುತ್ತಿದ್ದುದರಿಂದ ವಾಣಿಗೆ ಪ್ರತಿಜ್ಞಾಪಾಲನೆಯು ಕಷ್ಟವಾಗಿ ತೋರಲಿಲ್ಲ. ನಿಜವಾಗಿ ನೋಡಿದರೆ ಇಂದುವೇ ವಾಣಿಯ ಪ್ರತಿಜ್ಞೆಯನ್ನು ಪಾಲಿಸುವವಳಾಗಿದ್ದಳು. 

ಯೋಚನೆಗಳಿಗೆ ಎಡೆಕೊಡಬಾರದೆಂದು ಇಂದು ತನ್ನ ಹೆಚ್ಚಿನ ಸಮಯವನ್ನು ವಾಣಿಯ ಗೃಹಕೃತ್ಯಗಳಿಗಾಗಿ ಉಪಯೋಗಿಸತೊಡಗಿದಂದಿನಿಂದ ಅವರ ಗೃಹಕಾರ್ಯಗಳು ಸುಸೂತ್ರವಾಗಿ ನಡೆಯತೊಡಗಿದವು. ತನ್ನ ಮನೆಯಲ್ಲಾದ ಈ ಮಾರ್ಪಾಡನ್ನು ರತ್ನ ನೋಡದಿರಲಿಲ್ಲ. ನೋಡುತ್ತಿದ್ದಂತೆ ತಾನೆಂದೂ ನೋಡದಿದ್ದ ಇಂದುವಿನ ಕಾರ್ಯಕುಶಲತೆಗಾಗಿ ಅವನ ಮೆಚ್ಚಿಕೆಯೂ ಬೆಳೆಯದಿರಲಿಲ್ಲ. ಮನೆಯ ಪ್ರತಿಯೊಂದು ವಸ್ತುವಿನ ಸುವ್ಯವಸ್ಥಿತ ಶಿಸ್ತಿನಲ್ಲಿಯೂ ಅವನಿಗೆ ಇಂದುವಿನ ನೆನಪಾಗುತ್ತಿತ್ತು. ಅವಳನ್ನವನು ಪ್ರತ್ಯಕ್ಷವಾಗಿ ನೋಡಿರದಿದ್ದರೂ ಅವಳ ಕೆಲಸಗಳನ್ನು ನೋಡಿ ಅವಳ ಚಿತ್ರವನ್ನು ಕಲ್ಪಿಸಿಕೊಂಡಿದ್ದನು. ಅವನ ಆ ಕಾಲ್ಪನಿಕ ಇಂದುವು ಆದರ್ಶ ಸ್ತ್ರೀಯಾಗಿದ್ದಳು. ಸುಯೋಗ್ಯ ಗೃಹಿಣಿಯಾಗಲು ಬೇಕಾಗ ಎಲ್ಲಾ ಸುಗುಣಗಳೊಡನೆ ಅವಳಿಗೆ ಅಪೂರ್ವ ಸೌಂದರ್ಯವೂ ಇತ್ತು. ಆದರೆ ಅದೇಕೋ! ಇಷ್ಟೆಲ್ಲ ಸುಂದರವಾಗಿ ಚಿತ್ರಿಸಿದ ಆ ಇಂದುವಿನ ಮೋರೆಯಲ್ಲಿ ನಗುವಿಲ್ಲ ಅವಳ ಕಣ್ಣುಗಳಲ್ಲಿ ಹಾಸ್ಯವಿಲ್ಲ, ಬಹುಶಃ ಯಾವಾಗಲೂ ನಗುನಗುತ್ತಿರುವ ವಾಣಿಯನ್ನು ನೋಡಿಕೊಂಡಿದ್ದುದರಿಂದಲೇನೋ! ಅವಳಿಗಿಂತ ಎಲ್ಲಾ ತರದಲ್ಲೂ ಬೇರೆಯಾದ ಇಂದುವಿನ ಮುಖದಲ್ಲಿ ನಗುವಿರಬಾರದೆಂದು ಹಾಗೆ ಚಿತ್ರಿಸಿರಬಹುದು. 

ಮೊದಮೊದಲು ಅವಳ ಕೆಲಸಗಳನ್ನು ಮೆಚ್ಚಿ, ಇಷ್ಟೊಂದು ಕಾರ್ಯಕುಶಲೆಯಾದ ಇಂದು ಹೇಗಿರಬಹುದು ಎಂದು ಒಂದು ತರದ ಕುತೂಹಲದಿಂದ ಇಂದುವಿನ ಚಿತ್ರವನ್ನು ಮನದೊಳಗೆ ಚಿತ್ರಿಸತೊಡಗಿದ್ದ ರತ್ನನಿಗೆ ಬರಬರುತ್ತ ಅವಳನ್ನು ಯಾವಾಗಲೂ ಚಿತ್ರಿಸುವುದೇ ಒಂದು ಹವ್ಯಾಸವಾಗಿ ಹೋಯ್ತು. ಒಮ್ಮೊಮ್ಮೆ ತುಂಬಾ ಕೆಲಸದ ಮಧ್ಯದಲ್ಲೂ ಅವನಿಗೆ ಇಂದುವಿನ ಯೋಚನೆ ಬಂದುಬಿಡುತ್ತಿತ್ತು. ತಾನು ಯತ್ನಿಸದಿದ್ದರೂ ತಾನಾಗಿ ಮೂಡುವ ಅವಳ ಯೋಚನೆ, ರೂಪಗಳಿಗಾಗಿ ಅವನಿಗೆ ಆಶ್ಚರ್ಯವಾಗುತ್ತಿತ್ತು. ಇದೆಂಥಾ ಭ್ರಾಂತಿ ! ಎಂದು ಸ್ವಲ್ಪ ಕೋಪವೂ ಬರುತ್ತಿತ್ತು. ಆದರಿದೆಲ್ಲಾ ವಾಣಿಯ ಪ್ರತಿಜ್ಞೆಗಳಂತೆ ಒಂದು ಸ್ವಲ್ಪ ಹೊತ್ತಿಗೆ ಮಾತ್ರವಷ್ಟೆ. ಇತರರ ಅಸಾಧ್ಯ ರೋಗಗಳನ್ನು ತನ್ನ ಔಷಧಿಗಳ ಬಲದಿಂದ ವಾಸಿಮಾಡುತ್ತಿದ್ದ ರತ್ನನಿಗೆ ಕೊನೆಕೊನೆಗೆ ಇಂದುವನ್ನು ಚಿತ್ರಿಸುವ ರೋಗದಿಂದ ಪಾರಾಗಲು ಅಸಾಧ್ಯವಾಗಿ ತೋರಿತು. ಏನೇನು ಮಾಡಿದರೂ ತನ್ನ ಮನೋರಾಜ್ಯದಿಂದ ಮಾಸದ ಇಂದುವಿನ ಕಾಲ್ಪನಿಕ ರೂಪವನ್ನು ಸಂಪೂರ್ಣವಾಗಿ ಉಜ್ಜಿ ಬಿಡಲು ಅವನಿಗೆ ಕೊನೆಗೆ ತೋರಿದ ಒಂದೇ ಒಂದು ಉಪಾಯವೆಂದರೆ ಅವಳನ್ನು ಪ್ರತ್ಯಕ್ಷವಾಗಿ ನೋಡಿಬಿಡುವುದು. ತಾನು ಚಿತ್ರಿಸಿದಷ್ಟು ಸುಂದರವಾಗಿರದ ಅವಳನ್ನು ಸ್ವತಃ ನೋಡಿದರೆ ತನ್ನ ಭ್ರಾಂತಿ ಮಾಸಬಹುದೆಂದು ಅವನಿಗೆ ತೋರಿತು. 

ರತ್ನನಿಗೆ ಇಂದುವನ್ನು ಪ್ರತ್ಯಕ್ಷ ಮಾಡಿಕೊಳ್ಳುವುದೇನೂ ಕಷ್ಟದ ಮಾತಾಗಿರಲಿಲ್ಲ. ತಾನು ಮನೆಯಲ್ಲಿಲ್ಲದ ವೇಳೆಯಲ್ಲೆಲ್ಲಾ ಅವಳು ತನ್ನ ಮನೆಗೆ ಬರುವಳೆಂಬುದು ಅವನಿಗೆ ಗೊತ್ತಿದ್ದ ವಿಷಯ. ಅನಿರೀಕ್ಷಿತವಾಗಿ ತಾನು ಮನೆಗೆ ಬಂದುದಾದರೆ ಅವಳು ಕಾಣಸಿಕ್ಕುವಳೆಂದೂ ಅವನಿಗೆ ಗೊತ್ತು. ಅದೇ ಒಂದು ದಿನ ಸಾಯಂಕಾಲ ಮನೆಗೆ ಬರಲು ಹೊತ್ತಾಗುವದೆಂದು ಹೇಳಿ ಹೋದವನು ಮೂರು ಗಂಟೆ ಹೊಡೆಯುವ ಮೊದಲೇ ಮನೆಗೆ ಬಂದ. ತನ್ನೆಣಿಕೆಯಂತೆ ಇಂದುವು ಮನೆಯಲ್ಲಿರುವಳೆಂದು ಬಾಗಿಲಿಗೆ ಬರುವಾಗಲೇ ಒಳಗೆ ನಡೆಯುತ್ತಿದ್ದ ಸಂಭಾಷಣೆಯಿಂದ ಅವನಿಗೆ ತಿಳಿಯಿತು. ನಿಧಾನವಾಗಿ ಒಳಗೆ ಹೋದ. 

ನಡುಮನೆಯ ಮೇಜಿನ ಮೇಲೆ ಬಿದ್ದಿದ್ದ ಒಂದು ಮೂಟೆ ಅವನ ಬಟ್ಟೆಗಳನ್ನು ಇಸ್ತ್ರಿ ಮಾಡಿ ಮಡಿಸಿಡುತ್ತಾ ಬಾಗಿಲಿಗೆ ಬೆನ್ನು ಹಾಕಿ ನಿಂತಿದ್ದಳು, ಇಂದು, ವಾಣಿ ಅದೇ ಮೇಜಿನ ಒಂದು ಕೊನೆಯಲ್ಲಿ ಕಾಲುಗಳನ್ನು ಇಳಿಬಿಟ್ಟುಕೊಂಡು ಕುಳಿತು ಮಾತಿನ ಸಂಭ್ರಮದಲ್ಲಿ ಮೈಮರೆತಿದ್ದಳು. 

ಬಾಗಿಲ ಹತ್ತಿರವೇ ಐದಾರು ನಿಮಿಷಗಳಿಂದ ರತ್ನ ನಿಂತಿದ್ದರೂ ಇಬ್ಬರಿಗೂ ಅವನು ಬಂದುದು ತಿಳಿಯಲಿಲ್ಲ. ರತ್ನ ಮಾತಿನ ಮಳೆ ಸುರಿಸುತ್ತಿದ್ದ ತನ್ನ ಹೆಂಡತಿಯನ್ನೂ, ಕೆಲಸದಲ್ಲಿ ಮುಳುಗಿದ್ದರೂ ಅವಳಿಗೆ ಸಮಯೋಚಿತವಾದ ಉತ್ತರಗಳನ್ನು ಹೇಳುತ್ತಿದ್ದ ಇಂದುವನ್ನೂ ಜೊತೆಯಾಗಿ ನೋಡಿದ. ಅವರಿಬ್ಬರೊಳಗಿನ ಅಜಗಜಾಂತರ ವ್ಯತ್ಯಾಸವನ್ನೂ ನೋಡಿ ಇಂದುವಿನ ಚಿತ್ರವನ್ನು ಸಂಪೂರ್ಣವಾಗಿ ಉಜ್ಜಿಬಿಡಬೇಕೆಂದು ಬಂದಿದ್ದವನು ಹೊಸದಾಗಿ ಚಿತ್ರಿಸತೊಡಗಿದ. ಹೌದು, ಅವನ ಕಾಲ್ಪನಿಕ ಇಂದುವಿನ ಅಪ್ರತಿಮ ಸೌಂದರ್ಯವು ನಿಜವಾದ ಇಂದುಗಿಲ್ಲದಿದ್ದರೂ ಅವಳ ಕಾರ್ಯತತ್ಪರತೆಯು ಆ ಕಮ್ಮಿಯನ್ನು ತುಂಬಿಕೊಟ್ಟಿತು. ಐದು, ಹತ್ತು, ಹದಿನೈದು, ನಿಮಿಷಗಳಾದರೂ ರತ್ನ ನಿಂತಲ್ಲಿಂದ ಕದಲಲಿಲ್ಲ. ಈ ಮಧ್ಯೆ ವಾಣಿ ಅದೇಕೋ ಬಾಗಿಲ ಕಡೆ ತಿರುಗಿದವಳು ರತ್ನನನ್ನು ನೋಡಿ-ಏನು 

ಇಷ್ಟೊಂದು ಬೇಗ? ಸಿನಿಮಾಕ್ಕೊಗೋದಕ್ಕೋ..' ಎಂದು ಮೇಜಿನಿಂದ ಕೆಳಗಿಳಿದಳು. ಆಗಲೇ ಇಂದುವಿಗೂ ರತ್ನ ಬಂದುದರ ಅರಿವಾದುದು. ಅವನ ಆಕಸ್ಮಿಕ ಬರುವಿನಿಂದ ಅಪ್ರತಿಭಳಾದ ಅವಳು ಫಕ್ಕನೆ ಇಸ್ತ್ರಿ ಪೆಟ್ಟಿಗೆಯನ್ನು ಕೆಳಗಿಟ್ಟು ತಿರುಗಿದಳು. ಸರಿ, ರತ್ನನ ಚಿತ್ರದಲ್ಲಿ ಬಾಕಿ ಉಳಿದಿದ್ದ ಮುಖವೂ ಪೂರ್ಣವಾಯ್ತು. 

ತಿರುಗಿದ ಇಂದು ಎವೆಯಿಕ್ಕದೆ ತನ್ನ ಮುಖನೋಡುತ್ತಿದ್ದ ರತ್ನನನ್ನು ನೋಡಿ ಸಂಕೋಚದಿಂದ ಮಾಡುವ ಕೆಲಸವನ್ನು ಅಷ್ಟಕ್ಕೇ ಬಿಟ್ಟು ಹಿತ್ತಲಬಾಗಿಲಿಗಾಗಿ ತನ್ನ ಮನೆಗೆ ನಡೆದು ಬಿಟ್ಟಳು. ರತ್ನ ತನ್ನನ್ನು ಸಿನಿಮಾಕ್ಕೆ ಕರೆದುಕೊಂಡು ಹೋಗುವ ಸಲುವಾಗಿ ಬೇಗ ಬಂದಿರುವನೆಂದೆಣಿಸಿದ ವಾಣಿ ಅವನೊಡನೆ ಪ್ರಶ್ನೆ ಕೇಳುವ ಸಂಭ್ರಮದಲ್ಲಿ ಅವಳನ್ನು ತಡೆಯಲೂ ಇಲ್ಲ.. 

ಮತ್ತೆ ಒಂದೂವರೆ ಗಂಟೆಯ ತರುವಾಯ ವಾಣಿ ಇಂದುವನ್ನೂ ತಮ್ಮೊಡನೆ ಸಿನಿಮಾಕ್ಕೆ ಕರೆದುಕೊಂಡು ಹೋಗುವ ಸಲುವಾಗಿ ಅವಳ ಮನೆಗೆ ಹೋದಾಗ ಇಂದು ತಲೆನೋವೆಂದು ಮಲಗಿದ್ದಳು. ವಾಣಿ 'ಸಿನಿಮಾಕ್ಕೆ ಬಾ' ಎಂದು ಮಾಡಿದ ಬಲವಂತವೆಲ್ಲವೂ ವ್ಯರ್ಥವಾಯ್ತು. ನಿಜಕ್ಕೂ ಅವಳಿಗೆ ತಲೆನೋವಿದ್ದುದೇನೋ ಹೌದು. ಆದರೆ ಆ ತಲೆನೋವು ಬರಲು ಕಾರಣ ಬಗೆಹರಿಯದಿದ್ದೊಂದು ಸಮಸ್ಯೆ ಎಂದು ಮಾತ್ರ ವಾಣಿಗೆ ತಿಳಿಯಲಿಲ್ಲ. ತಿಳಿದಿದ್ದರವಳು ಸಿನಿಮಾಕ್ಕೆಂದು ಹೊರಟು ನಿಂತಿದ್ದ ರತ್ನನನ್ನು ಇಂದುವಿನ ಮನೆಗೆ ಕರತರುತ್ತಿರಲಿಲ್ಲ. 

ಸಿನಿಮಾವನ್ನು ನೋಡಿಯಾದರೂ ಇಂದುವಿನ ಚಿತ್ರವು ಅಳಿಸಿ ಹೋಗಬಹುದೆಂದು ರತ್ನ ವಾಣಿಯ ಇಚ್ಛೆಯಂತೆ ಸಿನಿಮಾಕ್ಕೆ ಹೊರಟಿದ್ದ. ಆದರೆ ಅಷ್ಟಕ್ಕೇ ಹುಡುಗಾಟಿಕೆಯ ವಾಣಿ ಸುಮ್ಮನಾಗದೆ 'ಇಂದುವನ್ನೂ ಕರೆದುಕೊಂಡು ಹೋಗೋಣ' ಎಂದು ರತ್ನ ನಿರೋಧಿಸುತ್ತಿದ್ದಂತೆಯೇ ಇಂದುವನ್ನು ಕರೆದುಕೊಂಡು ಬರಲು ಓಡಿದಳು. ವಾಣಿ ಹಿಂತಿರುಗುವಾಗ ಇಂದು ಅವಳ ಜೊತೆಯಲ್ಲಿಲ್ಲದುದನ್ನು ನೋಡಿ ರತ್ನನಿಗೆ ಸಮಾಧಾನವಾಯ್ತು. ಆದರೆ ವಾಣಿ ಬಂದು 'ಇಂದುವನ್ನು ಸ್ವಲ್ಪ ನೋಡಿ ಔಷಧಿ ಮಾಡಿ ಕೊಡಿ' ಎನ್ನುವಾಗ ಅವನಿಗೆ ವಾಣಿಯ ಹುಡುಗಾಟಿಕೆಗಾಗಿ ಕೋಪಬಂತು. 'ಸ್ವಲ್ಪ ತಲೆನೋವಾದ್ರೆ ಏನ್ಮಹಾ! ಒಂದು ಏಸ್ಪರಿನ್ ಮಾತ್ರೆ ಕೊಟ್ಟು ಬೇಗ ಬಾಹೊತ್ತಾಗಿ ಹೋಗುತ್ತೆ' ಎಂದು ಸ್ವಲ್ಪ ಒರಟಾಗಿಯೇ ಹೇಳಿದ. ಬೇರೆ ಸಮಯದಲ್ಲಾಗಿದ್ದರೆ ಇಂದುವನ್ನು ನೋಡಿ ಔಷಧಿಕೊಡಲು ಅವನಿಗೆ ಯಾವ ಅಭ್ಯಂತರವೂ ಇರುತ್ತಿರಲಿಲ್ಲ. ದಿನ ಬೆಳಗಾದರೆ ನೋಡುವ ಇತರ ರೋಗಿಗಳ ಗುಂಪಿಗೆ ಅವಳು ಸೇರಿಹೋಗುತ್ತಿದ್ದಳು. 

ಆದರೆ ಆಗ, ಇಂದುವನ್ನು ಮರೆಯಬೇಕೆಂದು ಯತ್ನಿಸುತ್ತಿರುವಾಗ, ಅವಳ ಮನೆಗೆ ಹೋಗಿ ಔಷಧಿ ಮಾಡಿಕೊಡಬೇಕೆಂದು ಬಲವಂತ ಪಡಿಸುವ ವಾಣಿಯ ಮಾತುಗಳು ಅವನಿಗೆ ಅಸಹ್ಯವಾಗಿದ್ದವು. ಇದು ಸರಳ ವಾಣಿಯ ಹುಡುಗಾಟಿಕೆಯ ಬುದ್ದಿಗೆ ತಿಳಿಯುವುದು ಹೇಗೆ ? ಒಂದೇಸವನೆ ಹಠಮಾಡಿ ಕೊನೆಗೂ ರತ್ನನನ್ನು ಇಂದುವಿನ ಮನೆಗೆ ಎಳೆದೊಯ್ದಳು, 

ಒಂದೇ ದಿನದಲ್ಲಿ, ಕೆಲವೇ ಗಂಟೆಗಳ ಅಂತರದಲ್ಲಿ ಅದೂ ಅವಳ ಮನೆಯಲ್ಲೇ ರೋಗಿಯ ಅವಸ್ಥೆಯಲ್ಲಿ ಇಂದುವನ್ನು ಪುನಃ ನೋಡುವ ಪ್ರಸಂಗವು ಬರಬಹುದೆಂದು ರತ್ನ ಎಂದೂ ಯೋಚಿಸಿರಲಿಲ್ಲ. ಅದರಲ್ಲೂ ತಾನು ಇನ್ನೊಮ್ಮೆ ನೋಡುವಾಗ ಅವಳಳುವುದನ್ನು ನೋಡಬಹುದು ಎಂಬುದು ಅವನು ಕನಸಿನಲ್ಲಿ ಸಹ ಊಹಿಸದ ಮಾತು. ಹೌದು; ಇಂದು ಅಳುತ್ತಿದ್ದಳು ಬಿಕ್ಕಿ ಬಿಕ್ಕಿ ಚಿಕ್ಕಮಕ್ಕಳಂತೆ ಅಳುತ್ತಿದ್ದಳು. ತಲೆನೋವಿನ ಬಾಧೆಗಾಗಿ ತಾನಳುವುದಿಲ್ಲವೆಂದು ಗೊತ್ತಿದ್ದರೂ, ಅಳುವ ಕಾರಣವು ಏನೆಂದು ಅವಳಿಗೆ ತಿಳಿಯದಷ್ಟು ಸೂಕ್ಷ್ಮವಾಗಿತ್ತು. 

ವಾಣಿ ಮೊದಲನೆಯ ಸಾರಿ ಬಂದುಹೋದ ತರುವಾಯ ಅವಳ ಅಳು ಸುರುವಾಗಿತ್ತು. ತಾನತ್ತರೂ ಸತ್ತರೂ ಬಂದು ನೋಡುವವರು ಯಾರೂ ಇಲ್ಲವೆಂಬ ಧೈರ್ಯದಿಂದಲೇ ಅಳುವೂ ನಿರಾತಂಕವಾಗಿ ಸಾಗಿತ್ತು. ಅವಳೆಣಿಸಿದಂತೆ ವಾಣಿ ಸಿನಿಮಾಕ್ಕೆ ಹೋಗದೆ ರತ್ನನನ್ನು ತಮ್ಮನೆಗೆ ಕರೆದುಕೊಂಡು ಬರುವಳೆಂದು ಅವಳಿಗೆ ಹೇಗೆ ಗೊತ್ತಾಗಬೇಕು ? 

ಅವಳಳುವಿಗೆ ವಾಣಿ ರತ್ನ ಇಬ್ಬರಿಗೂ ತೋರಿದ ಒಂದೇ ಒಂದು ಕಾರಣ ಅವಳ ಅಸಾಧ್ಯವಾದ ತಲೆನೋವು, ಎಷ್ಟು ಅಕಸ್ಮಾತ್ತಾಗಿ ಇಂದುವಿನ ಅಳುವು ಸುರುವಾಗಿತ್ತೋ ಅಷ್ಟೇ ಬೇಗನೆ ರತ್ನ ವಾಣಿಯರನ್ನು ನೋಡಿ ನಿಂತುಹೋಯ್ತು, ಚಿಕ್ಕ ಮಕ್ಕಳಂತೆ ತಾನಳುವುದನ್ನು ಅವರು ನೋಡಿಬಿಟ್ಟರಲ್ಲಾ ಎಂದು ಅವಳು ಭೂಮಿಗಿಳಿದು ಹೋದಳು. ಮತ್ತೆ ತನಗೆ ಹೇಳದೆಯೇ ವಾಣಿ ರತ್ನನನ್ನು ಕರೆದುಕೊಂಡು ಬಂದಳಲ್ಲಾ ಎಂದು ಬೇರೆ. ರತ್ನನಿಗೂ ಹಾಗೆಯೇ. ಇಂದು-ಅಳುತ್ತಿರುವ ಇಂದುವನ್ನು ನೋಡಿ ಮನಸ್ಸಿನ ಬೇರೆಲ್ಲಾ ಯೋಚನೆಗಳೂ ಮಾಯವಾಗಿ, ಚಿಕ್ಕಮಕ್ಕಳನ್ನು ಸಂತೈಸುವಂತೆ ಅವಳನ್ನೂ ಸಂತೈಸಿ ಸಮಾಧಾನ ಪಡಿಸಬೇಕೆಂದು ತೋರಿತು. ಆದರೆ ಪಕ್ಕದಲ್ಲೇ ನಿಂತಿದ್ದ ವಾಣಿಯೂ ಅವನ ನಾಲ್ಕಾರು ವರ್ಷಗಳ ರೋಗಿಗಳನ್ನು ನೋಡಿದ ಅಭ್ಯಾಸಬಲವೂ ಅವನನ್ನು ಬದುಕಿಸಿದುವು. ಮನದೊಳಗೆ ಯೋಚನೆಗಳ ಯುದ್ಧವೇ ನಡೆಯುತ್ತಿದ್ದರೂ ಹೊರಗೆ ಗಂಭೀರವಾಗಿ ಅವಳ ತಲೆ ಮುಟ್ಟಿ ನೋಡಿದ. ಮತ್ತೆ ವಾಣಿಯ ಕಡೆ ತಿರುಗಿ 'ಜ್ವರವೂ ಇದೆ' ಎಂದ. ಅದಕ್ಕೆ ವಾಣಿ 'ನೀವು ಔಷಧಿ ಮಾಡಿಕೊಟ್ಟು ಸಿನಿಮಾಕ್ಕೆ ಹೋಗಿ; ನಾನಿಲ್ಲೇ ಇರುತ್ತೇನೆ' ಎಂದು ಇಂದುವಿನ ನಿರೋಧವನ್ನು ಮೂಲೆಗೊತ್ತಿ ಅಲ್ಲೇ ಕುಳಿತುಬಿಟ್ಟಳು. ರತ್ನ ಒಬ್ಬನೇ ಸಿನಿಮಾಕ್ಕೆ ಹೋದ, ಆದರೆ ಆ ದಿನ ರಾತ್ರಿ ವಾಣಿ “ನೀವು ನೋಡಿದ ಚಿತ್ರ ಯಾವುದು ?' ಎಂದು ಕೇಳಿದರೆ 'ಅಳುತ್ತಿದ್ದ ಇಂದುವಿನ ಮುಖ' ಎಂದವನು ಹೇಳಬೇಕಾಗುತ್ತಿತ್ತು, 

ಅಂದಿನ ತಲೆನೋವು ಇಂದು ರತ್ನರ ಪರಿಚಯಕ್ಕೆ ಅಡಿಗಲ್ಲಾಯಿತು. ಮೊದಮೊದಲು ರತ್ನನಿದಿರು ಹೋಗಲು ನಾಚುತ್ತಿದ್ದ ಇಂದು ಈಗವನೊಡನೆ ನಿಸ್ಸಂಕೋಚವಾಗಿ ಮಾತಾಡುತ್ತಿದ್ದಳು. ಅವರಿಬ್ಬರೊಡನೆ ಸಿನಿಮಾಕ್ಕೆ ಹೋಗುವುದು ಸಹ ಅವಳ ಕಾರ್ಯಕ್ರಮಗಳಲ್ಲಿ ಸೇರಿ ಹೋಯ್ತು. ಹೀಗೆ ನೆರಮನೆಯ ಒಕ್ಕಲು ಬಂದು ಆರು ತಿಂಗಳು ತುಂಬುವ ಮೊದಲು ಇಂದುವಿನ ಏಕಾಂತ ಜೀವನ ಸಂಪೂರ್ಣ ಬದಲಾಯಿತು. ಬದಲಾಯಿತು ಅಷ್ಟ- 

ಅದರಿಂದವಳಿಗೆ ಹೆಚ್ಚಿನ ಶಾಂತಿ ಯಾ ಸುಖದೊರೆಯಿತೆಂದರೆ ತಪ್ಪಾಗುವುದು. ಆ ಮನೆಗೆ ಮೊದಲು ಬಂದಾಗಿದ್ದ ತನ್ನ ಮನೆ, ತಾನು, ಸ್ವತಂತ್ರವಾಗಿ ಸುಖವಾಗಿದ್ದೇನೆ ಎಂಬ ಅಭಿಮಾನವೂ ತೃಪ್ತಿಯೂ ಈಗಿರಲಿಲ್ಲ. ಅಷ್ಟರಲ್ಲೇ ನಾನು ಸುಖವಾಗಿದ್ದೇನೆ ಇರಬಲ್ಲೆ ಎಂದಿದ್ದ ಅವಳ ಭಾವನೆಯು ವಾಣಿ ರತ್ನರ ಸಂಸಾರವನ್ನು ನೋಡಿದಂದಿನಿಂದ ತನ್ನ ಜೀವನದಲ್ಲೂ ಒಂದು ದೊಡ್ಡ ಅಭಾವವಿದೆ ಎಂಬುದನ್ನು ಕಂಡುಕೊಂಡಿತ್ತು, ಮೊದಲು ಬಲು ಅಸ್ಪಷ್ಟವಾಗಿ ಮೊಳೆತ ಈ ಭಾವನೆಯು ವಾಣಿ ರತ್ನರಲ್ಲಿ ಹೆಚ್ಚಿನ ಬಳಕೆಯಾದಂತೆಲ್ಲಾ ಚಿಗುರುತ್ತಲೇ ಇತ್ತು. ಮತ್ತೆ ರತ್ನನೂ ಸದಾ ಇವಳನ್ನು ಯೋಚಿಸುತ್ತಿದ್ದುದರಿಂದಲೇನೋ! ಅವಳ ಮನವು ಇಚ್ಛೆಗೆ ವಿರೋಧವಾಗಿ ರತ್ನನ ಕಡೆ ಒಲಿಯತೊಡಗಿತು. 

ಇಂದು. ರತ್ನರ ಮನಸ್ಸಿನಲ್ಲಿ ಒಬ್ಬರದೊಬ್ಬರಿಗೆ ತಿಳಿಯದಂತೆ ಈ ರೀತಿಯ ಭಾವನೆಗಳು ಮೂಡಿ ಮೊಳೆಯುತ್ತಿದ್ದಾಗ, ವಾಣಿಗೆ ಅಕಸ್ಮಾತ್ತಾಗಿ ತೌರುಮನೆಗೆ ಹೋಗುವ ಪ್ರಸಂಗ ಬಂದಿತು. ಬೇಸಿಗೆಯಲ್ಲಿ ಒಂದು ತಿಂಗಳು ರಜಾಪಡೆದು ಗಂಡಹೆಂಡಿರಿಬ್ಬರೂ ಜೊತೆಯಾಗಿ ಹೋಗುವುದೆಂದು ಮೊದಲೇ ನಿಶ್ಚಯವಾಗಿತ್ತು. ಆದರೆ ಅನಿರೀಕ್ಷಿತವಾಗಿ ಅವಳ ತಾಯಿಗೆ ಖಾಯಿಲೆ ಎಂದು ಅವಳಣ್ಣ ಅವಳನ್ನು ಕರೆದುಕೊಂಡು ಹೋಗಲು ಬಂದುಬಿಟ್ಟ. ರತ್ನನಿಗೆ ಆಗ ರಜಾ ಸಿಕ್ಕುವಂತಿರಲಿಲ್ಲ. ಆದುದರಿಂದ ವಾಣಿಯೊಬ್ಬಳ ಅಣ್ಣನೊಡನೆ ಹೊರಟು ಹೋದಳು. 

ಹುಚ್ಚುಹಡುಗಿ! ಹೋಗುವಾಗ ಇಂದುವಿನೊಡನೆ 'ಇಂದೂ, ಅಮ್ಮನಿಗೆ ಕಾಯಿಲೆ; ವಾಸಿಯಾದೊಡನೆಯೇ ಬಂದುಬಿಡುತ್ತೇನೆ. ನಾನು ಬರುವ ತನಕ ಸ್ವಲ್ಪ ನಮ್ಮನೆಕಡೆ ನೋಡಿಕೋ' ಎಂದಳು ರತ್ನನೂ ಅಲ್ಲೇ ನಿಂತಿದ್ದ. ಇಂದು ಬೇರೇನೂ ಹೇಳಲಾರದೆ 'ಹೂಂ' ಎಂದಳು. ಆದರೆ ವಾಣಿಯೊಡನೆ 'ಹೂಂ' ಎಂದುದೆಷ್ಟೋ ಅಷ್ಟೇ ಅವಳು ಹೊರಟುಹೋದ ತರುವಾಯ ಇಂದು ಆ ಕಡೆ ಹೋಗಲಿಲ್ಲ. ಅವಳು ಸ್ವಭಾವತಃ ಪಾಪಭೀರು, ಸಮಾಜದ ಕಟ್ಟು-ಕಟ್ಟಲೆಗಳನ್ನೇ ದೇವರ ನಿಯಮಗಳು ಎಂದು ತಿಳಿದು ಬೆಳೆದವಳು. ಅವಳಿಗೆ ತನ್ನೊಲವು ರತ್ನನ ಕಡೆ ತಿರುಗಿದೆ ಎಂಬುದರ ಅರಿವು ಆದಾಗಲೇ ಬಹಳ ಭಯವಾಯಿತು. ವಾಣಿ ಹೊರಟುಹೋದ ಮೇಲಂತೂ ಅವಳ ಭಯವು ಒಂದಕ್ಕೆ ಹತ್ತಾಗಿ ಬೆಳೆಯತೊಡಗಿತು. ತನ್ನ ಶಾಂತ ಜೀವನ ಪ್ರವಾಹವನ್ನು ಕಲಕಿ ಕದಡಿಸುವ ಯೋಚನೆಗಳಿಗೆ ಹೃದಯದಲ್ಲೆಡ ಕೊಟ್ಟೆ ಹೇಗೆ? ಏಕೆ? ಎಂಬ ಪ್ರಶ್ನೆಗಳು ಸದಾ ಅವಳನ್ನು ಬಾಧಿಸತೊಡಗಿದವು. ಆದರೆ ಈ ಯೋಚನೆಗಳ ಜೊತೆಯಲ್ಲೇ ರತ್ನನ ಮೂರ್ತಿಯೂ ಅವಳ ಹೃದಯದಲ್ಲಿ ಮೂಡಿಹೋಗಿತ್ತು. ವಾಣಿಯ ಪತಿಯನ್ನು ತಾನು ಪ್ರೀತಿಸುವುದು ಅವಳ ಶಕ್ತಿಗೆ ಮೀರಿದ ಮಾತಾಗಿತ್ತು. ತನ್ನ ಈ ಅನುಚಿತ ಪ್ರೇಮವು ರತ್ನನಿಗೆಲ್ಲಿ ತಿಳಿದು ಬಿಡುವುದೋ ಎಂಬ ಭಯದಿಂದಲೇ ಅವಳು ವಾಣಿ ಹೊರಟು ಹೋದ ತರುವಾಯ ಆ ಕಡೆ ಸಹ ಹೋಗಲಿಲ್ಲ. ಹಿತ್ತಲಲ್ಲಿದ್ದ ಹೂಗಿಡಗಳ ಆರೈಕೆ ಮಾಡುವುದು ಸಹಾ ನಿಂತು ಹೋಯ್ತು. ತಾನಲ್ಲಿದ್ದಾಗ ನೆರೆಮನೆಯ ಹಿತ್ತಲಲ್ಲಿ ರತ್ನನ ಭೇಟಿಯಾಗಬಹುದೆಂಬ ಭಯವೇ ಇದಕ್ಕೆ ಕಾರಣ. 

ಈಗಂತೂ ಹೋಗದ ಹೊತ್ತನ್ನು ಕೊಲ್ಲುವುದಕ್ಕೆ ಇಂದುವಿಗುಳಿದ ಒಂದೇ ಒಂದು ಸಾಧನ: ಭಾವನಾಪ್ರಪಂಚದಲ್ಲಿ ಹಗಲು ಕನಸುಗಳನ್ನು ಹಣೆಯುವುದು; ಎಷ್ಟಾದರೂ ಇವೆಲ್ಲಾ ಕನಸುಗಳೇ ಎಂದು ಕಣ್ಣೀರು ತಂದುಕೊಳ್ಳುವುದು. ವಾಣಿ ಇದ್ದಾಗ ಪ್ರತಿದಿನ ಇಂದುವನ್ನು ನೋಡುತ್ತಿದ್ದ ರತ್ನನಿಗೆ ಈಗವರಿಬ್ಬರೂ ಜೊತೆಯಾಗಿ ಇಲ್ಲದಂತಾದುದರಿಂದ ತುಂಬಾ ಬೇಸರವಾಯ್ತು. ದಿನಾ ಇಂದು ಅವರ ಮನೆಗೆ ಹೋಗುತ್ತಿದ್ದಾಗ ಸ್ವಲ್ಪ ಸ್ವಲ್ಪವಾಗಿ ಅವನ ಹೃದಯವನ್ನಾಕ್ರಮಿಸಿದ್ದರ ಅರಿವು ಅವನಿಗಾದುದು ಅವಳು ಒಮ್ಮೆಗೇ ಆ ಕಡೆ ಹೋಗುವುದನ್ನು ನಿಲ್ಲಿಸಿದಾಗ, ಆಗ ಅವನಿಗೂ ಅವಳು ತಮ್ಮನೆಗೆ ಬರದಿರುವುದು ಒಳ್ಳೆಯದಾಯಿತು ಎಂದು ತೋರಿದರೂ ಚಪಲಮನಸ್ಸು ಮಾತ್ರ ಅವಳ ದರ್ಶನಕ್ಕೆ ತವಕಿಸುತ್ತಿತ್ತು. 

ವಾಣಿ ಹೊರಟುಹೋದ ಮೇಲವನಿಗೆ ಹೋಟೆಲಿನಲ್ಲಿ ಊಟ; ಕ್ಲಬ್ಬಿನಲ್ಲಿ ವಾಸ, ಮನೆಗೆ ಬರಬೇಕಾದರೆ ಬಟ್ಟೆ ಬದಲಾಯಿಸುವುದಕ್ಕೆ, ಮತ್ತೆ ರಾತ್ರಿ ನಿದ್ರೆ ಮಾಡುವುದಕ್ಕೆ ಅಷ್ಟೆ, ಕಬ್ಬಿನಿಂದ ಕೊನೆಯ ವ್ಯಕ್ತಿ ಹೋಗುವ ತನಕವೂ ಅವನಲ್ಲೇ ಇರುತ್ತಿದ್ದ. ಮತ್ತೆ ಹೋಟೆಲಿಗೆ ಹೋಗಿ ಊಟ ಮಾಡಿ ಮನೆ ತಲುಪಬೇಕಾದರೆ ಹನ್ನೊಂದು ಗಂಟೆ ಹೊಡೆದುಹೋಗುತ್ತಿತ್ತು. ಆದರೂ ಹಗಲೆಲ್ಲಾದರೂ ಮನೆಗೆ ಬಂದರೆ ಹಿತ್ತಲ ಕಡೆ ಹೋಗಿ ಇಂದು ಎಲ್ಲಾದರೂ ಇರುವಳೋ ಎಂದು ನೋಡದಿರುತ್ತಿರಲಿಲ್ಲ. 

ವಾಣಿ ಹೋಗಿ ಎರಡು ತಿಂಗಳುಗಳಾಗಿದ್ದರೂ ಸದ್ಯದಲ್ಲೇ ಬರುವ ಸೂಚನೆ ಏನೂ ಇರಲಿಲ್ಲ. ಒಂದು ದಿನ ಬೆಳಗ್ಗೆ ಇಂದು ನೀರು ಸೇದುತ್ತಿರುವಾಗ ರತ್ನ ಹಿತ್ತಲಬೇಲಿಯ ಹತ್ತಿರ ಬಂದ, ವಾಣಿ ಹೊರಟು ಹೋದ ಮೇಲೆ ಅದೇ ಅವರು ಮೊದಲ ಸಾರಿ ಒಬ್ಬರನ್ನೊಬ್ಬರು ನೋಡಿದ್ದು. ಅವಳಿರುವಾಗ ನಿಸ್ಸಂಕೋಚವಾಗಿ ಮಾತಾಡಿಕೊಂಡಿದ್ದ ಅವರಿಗೆ ಆಗ ಮಾತಾಡಲು ಏನೂ ತೋರಲಿಲ್ಲ. ಆದರೂ ಇಂದು ತಾನು ಸುಮ್ಮನಿದ್ದರೆ ಮನದ ಭಾವನೆಗಳಲ್ಲಿ ಬಯಲಾಗುವುದೋ ಎಂಬ ಭಯದಿಂದ 'ವಾಣಿ ಯಾವತ್ತು ಬಾಳೆ ?' ಎಂದು ಕೇಳಿದಳು. ಅವಳ ಆ ಪ್ರಶ್ನೆಗೆ ಪ್ರತ್ಯುತ್ತರ ಕೊಡುವ ಬದಲು ರತ್ನ 'ಆರೋಗ್ಯವಾಗಿರುವೆಯಾ ಇಂದಿರಾ ? ಇದೇನು ಇತ್ತೀಚೆಗೆ ನಿನ್ನನ್ನೂ ಕಾಣುವುದಿಲ್ಲ?' ಎಂದು ಕೇಳಿದ 

ಅದೇ ಮೊದಲವಳು ಅವನ ಬಾಯಿಂದ ತನ್ನ ಹೆಸರನ್ನು ಕೇಳಿದ್ದು, ಅಂದಿನವರೆಗೂ ಅವಳಿಗೆ ತನ್ನ ಹೆಸರು ಅಷ್ಟೊಂದು ಸುಂದರವೆಂದು ತಿಳಿದಿರಲಿಲ್ಲ. 

ರತ್ನನ ಬಾಯಿಂದ ಹೊರಟ ಮಾತ್ರಕ್ಕೆ ತನ್ನ ಹೆಸರಿನಲ್ಲಾದ ಬದಲಾವಣೆಯು ಅವಳ ಮುಖವನ್ನರಳಿಸಿತು. ಕಣ್ಣುಗಳು ಹೃದಯದ ಗುಟ್ಟುಗಳನ್ನೆಲ್ಲಾ ಹೊರಗೆಡವಿ ಅವನ ಮುಖವನ್ನು ನೋಡಿದವು. ರತ್ನನ ಕಣ್ಣುಗಳೂ ಮನದ ಭಾವನೆಗಳನ್ನು ಮುಚ್ಚಿಟ್ಟುಕೊಂಡಿರಲಿಲ್ಲ. ಅವನ ಆ ನೋಟವೇ ಭೂಮಿಯಿಂದ ಮೇಲಕ್ಕೆ-ಬಹು ಮೇಲಕ್ಕೆ ಹೋಗಿದ್ದ ಇಂದುವನ್ನು ಧರೆಗಿಳಿಸಿ ಮರೆತಿದ್ದ ಕರ್ತವ್ಯವನ್ನು ಜಾಗೃತಗೊಳಿಸಿದ್ದು, ಮರುಕ್ಷಣ ಸೇದಿದ್ದ ನೀರನ್ನು ಸಹ ತೆಗೆದುಕೊಳ್ಳದೆ ಒಳಗೆ ಹೋಗಿ ಬಿಟ್ಟಳು. ರತ್ನ ಬಹಳ ಹೊತ್ತು ಅಲ್ಲೇ ನಿಂತಿದ್ದರೂ ಪುನಃ ಅವಳು ಹೊರಗೆ ಬರಲಿಲ್ಲ. 

ಮರುದಿನ, ಮರುದಿನ, ಮರುದಿನವೆಂದು ಮೂರು ದಿನ ರತ್ನ ಇಂದುವನ್ನು ನಿರೀಕ್ಷಿಸಿದರೂ ಅವಳ ದರ್ಶನವಾಗಲಿಲ್ಲ. ನಾಲ್ಕನೆಯ ದಿನ ಟಪ್ಪಾಲು ಮೂಲಕ ಇಂದುಗೊಂದು ಕಾಗದ ಬಂತು. ರತ್ನನ ಅಕ್ಷರಗಳ ಪರಿಚಯವಿದ್ದ ಅವಳಿಗದು ಅವನದೆಂದು ನೋಡಿದೊಡನೆಯೇ ತಿಳಿಯಿತು. ತಿಳಿದು ಬಹಳ ಹೊತ್ತು ಒಡೆಯದೆ ಅದನ್ನು ಕೈಯ್ಯಲ್ಲಿ ಹಿಡಿದುಕೊಂಡು ಆಲೋಚಿಸುತ್ತ ಕುಳಿತಿದ್ದಳು. ಮತ್ತವಳು ಬಲುಹೊತ್ತಿನ ಮೇಲೆ ಅಲ್ಲಿಂದೇಳುವಾಗಲೂ ಅದು ಒಡೆಯಲ್ಪಟ್ಟಿರಲಿಲ್ಲ. ಆದರೆ ಅವಳ ಕಣ್ಣೀರಿನಿಂದ ಅಭಿಷಿಕ್ತವಾಗಿ ಒದ್ದೆಯಾಗಿಹೋಗಿತ್ತು. ಎದ್ದವಳು ಹಾಗೆಯೇ ಆ ಕಾಗದವನ್ನು ಹಿಡಿದುಕೊಂಡು ಅಡಿಗೆಮನೆಗೆ ಹೋದಳು. ಮತ್ತೊಂದು ನಿಮಿಷದಲ್ಲಿ ಒಲೆಯಲ್ಲಿ ಉರಿಯುತ್ತಿದ್ದ ಬೆಂಕಿಯಲ್ಲದು ಬೂದಿಯಾಗಿ ಹೋಯ್ತು- 

ಮತ್ತೊಂದು ವಾರದ ತರುವಾಯ ವಾಣಿ ತೌರುಮನೆಯಿಂದ ಬಂದಳು. ಬಂದವಳು ನೇರವಾಗಿ ಇಂದುವಿನ ಮನೆಗೆ ಹೋದಳು. ಇಂದುವಿನ ಮನೆಗೆ ಬೀಗ ಹಾಕಿತ್ತು. ನೋಡಿ ವಾಣಿಯ ಆಶ್ಚರ್ಯಕ್ಕೆ ಮಿತಿಯಿಲ್ಲ! ತನ್ನವರೆಂಬವರಿಲ್ಲದ ಇಂದು ಅದೆಲ್ಲಿಗೆ ಹೋಗಿರಬಹುದು ಎಂದವಳಿಗೆ, ಇದಿರು ಮನೆಯಲ್ಲಿ ವಿಚಾರಿಸಿದಳು. ಇಂದು ತನ್ನನ್ನು ಸಾಕಿದವರ ಮನೆಗೆ ಹೋಗಿರುವಳೆಂದು ತಿಳಿಯಿತು. ಇದನ್ನು ಕೇಳಿ ಅವಳಿಗೆ ಇನ್ನಷ್ಟು ಆಶ್ಚರ್ಯ, ತಾನೆಂದೆಂದಿಗೂ ಅವರ ಮನೆಗೆ ಹೋಗುವುದಿಲ್ಲವೆನ್ನುತ್ತಿದ್ದ ಇಂದು, ಈಗೇಕೆ ತಾನಾಗಿ ಅಲ್ಲಿ ಹೋದಳು ಎಂಬುದನ್ನು ತಿಳಿಯುವುದು ವಾಣಿಯ ಸರಳ ಶಕ್ತಿಗೆ ಮೀರಿದ ಮಾತಾಗಿತ್ತು. ಕೊನೆಗೂ ಅವಳಿಗೆ ಇಂದುವಿನ ಆಶ್ಚರ್ಯಕರವಾದ ವರ್ತನೆಯ ಕಾರಣವು ತಿಳಿಯಲಿಲ್ಲ. ತಿಳಿದಿದ್ದ ರತ್ನನೂ ಹೇಳುವ ಪ್ರಯತ್ನಕ್ಕೆ ಕೈ ಹಚ್ಚದುದರಿಂದ ಕೊನೆಯ ತನಕವೂ ವಾಣಿಗದು ಸಮಸ್ಯೆಯಾಗಿಯೇ ಉಳಿಯಿತು. 


Comments

Popular posts from this blog

Team Prakasam

Team Prakasam during one of it's Pot-luck Party on 17-03-2013 ( JOIN US HERE ) We at Prakasam  believe in team work and building a strong team.  All the work Prakasam has done in the past decade ( Kala Krushi Page ) has been possible because of the selfless and unconditional support of its team members.  Where there is a team there would be work related to performing arts and also many more merry gatherings, parties, team holidays etc.  LOOK AT US WHEN WE PLAY & WHEN WE WORK . We are listing the official ones below to enthuse and entertain committed performing arts lovers to join us as volunteers.  Join us by applying to our Production Internship Programme  or by answering 10 simple questions, CLICK HERE . All our Crazy Empathy Videos (even before there was tiktok or reels) Annual Trip 2023 Secret Santa+6 Birthdays+Mini Potluck on 25 Dec 2013 Niswarga trip post KHKS4 fest, 19 April 2013 IPL6 Empathy a Jumping J...

Katha Sangama "Bouquet of Stories"

Katha Sangama "Bouquet of Stories"  There has been a trend of short plays in the modern time of timelessness. We are so used to instant food, job, friendship, money we are also bombarded with requests for short plays. We now have successfully prepared the “Bouquet of Stories” exclusively for you. Marking the 100th birth anniversary of Kodagina Gowramma , the gallant feminist writer at her times (1912-1939) we are staging her short story too as part of this festival.  The play is in Kannada and the exquisite selection of the stories will make you want more. With eight Jnanapeth Awards and stalwarts to choose from we had to read more than 120 short stories written between early 1930’s to 2011 to arrive at this unique bouquet. We sincerely hope that you will have a blast watching this as we have creating this performance piece for you. We enclose a small brief below of the stories to give you a better idea of the performances. We have interwoven six stories, running around the ...

Prakasam Productions

  ಕಲಾ ಕೃಷಿ - Agriculture of Culture ಕಲಾ ಕೃಷಿ Kalaa Krushi, all the Performing Arts activities we do for Pradarshana Kalaa Samsthe (Prakasam).  This page is the index of all our endeavors.  We would appreciate your Feedback on our activities and request you to support our endeavors. Check out our dedicated & selfless team, our Team Activities & Join Hands with us for Kala Krushi.  If you are interested in joining us here is the WHATSAPP COMMUNITY LINK or mail us at prakasamtrust@gmail.com   Productions List: Home Theatre Toyota Road Awareness Program Jalpa Sanamathe Kathakhanda Sathya Nithya Isila Road awareness skit for Toyota   Varalakshmi Avaantara Caronammana Krupe Meenina Hejje Nivaarya Sahana Murthy Mahapeede Mahablu Masthi Kallu Namma Nimmolagobba Mr. Shambho Shiva Shankara Bhava Navanaveena Avalavanu Avanavalu Gulle Nari Ugalageete Bogie Katha Sangama Sairandhri Vaave Kattalu* Yaksha* Rayakota 1858* 13 Margosa Mahal Hosabelaku Doos...