Skip to main content

Sanchaya Cares Initiative Report

Sanchaya Cares Initiative Report


ಕೋವಿಡ್ 19 ಪಿಡುಗು ಇಡೀ ಜಗತ್ತಿನ ಹಾದಿಯನ್ನು ಬದಲಿಸಿತು. ಭಾರತ ಮತ್ತು ಕರ್ನಾಟಕ ಇದಕ್ಕೆ ಹೊರತಾಗಲಿಲ್ಲ. ಸಹಸ್ರಾರು ಜನ ತಮ್ಮ ಉಳಿತಾಯ, ಉದ್ಯೋಗಗಳನ್ನಷ್ಟೇ ಅಲ್ಲದೆ, ತಮ್ಮ ಕುಟುಂಬದ ಸದಸ್ಯರನ್ನೂ ಕೂಡ ಈ ಪಿಡುಗಿಗೆ ಕಳೆದುಕೊಂಡರು. ಎಲ್ಲರೂ ತಮ್ಮ ದೈನಂದಿನ ಜೀವನವನ್ನು ನಡೆಸಲು ಹೆಣಗಾಡುತ್ತಿರುವುದನ್ನು ನೋಡುವುದೇ ಒಂದು ಕಷ್ಟಕರ ಸಂಗತಿಯಾಗಿತ್ತು. ಆದರೂ ನಮ್ಮ ಸಮಾಜ ಒಗ್ಗಟ್ಟಾಗಿ ಜನರ ಈ ಕಷ್ಟಗಳಿಗೆ ಸ್ಪಂದಿಸಿದ ರೀತಿ ಅಮೋಘವಾಗಿತ್ತು. ಹಲವರು ಸಿದ್ದ ಆಹಾರವನ್ನು ತಯಾರಿಸಿ ಅಗತ್ಯವಿದ್ದ ವರ್ಗಕ್ಕೆ ತಲುಪಿಸುತ್ತಿದ್ದರೆ ಇನ್ನೂ ಹಲವರು ದಿನಸಿ ಸಾಮಾಗ್ರಿಗಳ ಕಿಟ್ ತಯಾರಿಸಿ ಅಗತ್ಯವಿದ್ದ ವರ್ಗಕ್ಕೆ ಭೇಧಭಾವವಿಲ್ಲದೆ ಪೂರೈಸಿದ ರೀತಿ ಅಭಿನಂದನೀಯ.

ಸಮಾರೋಪ ಸಮಾರಂಭದ ಸ್ವಂತೀ


ಸಂಚಯದ ಕೆಲ ಸದಸ್ಯರೂ ಕೂಡ ಈ ಕೆಲಸಗಳಲ್ಲಿ ಮತ್ತು ಕೋವಿಡ್ ವಾರಿಯರ್‍ಗಳಾಗಿ ತಮ್ಮನ್ನು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದರು. ಈ ವೇಳೆಯಲ್ಲೇ ಲಾಕ್‍ಡೌನ್‍ನ ಅರ್ಥ ಮತ್ತು ಸ್ವರೂಪ ನಮ್ಮ ಮುಂದೆ ನಿಧಾನವಾಗಿ ತೆರೆದುಕೊಳ್ಳುತ್ತಿತ್ತು. ನಮ್ಮ ಸಾಮಾಜಿಕ ಜವಬ್ದಾರಿಗಳನ್ನು ನಿಭಾಯಿಸುತ್ತಾ ಹಾಗೂ ಈ ಲಾಕ್‍ಡೌನ್‍ನಿಂದ ಹೊಮ್ಮಿದ ಹೊಸ ರೀತಿಯ ವರ್ಕ್‍ಫ್ರಂ ಹೋಮ್ ಸಂಸ್ಕøತಿಗೂ ನಾವು ಹೊಂದಿಕೊಳ್ಳತೊಡಗಿದೆವು. ನಮ್ಮ ಈ ಕಾರ್ಯಗಳ ನಡುವೆ ನಮ್ಮ ರಂಗಭೂಮಿಯ ಕೆಲಸಗಳನ್ನೂ ಕೂಡ ಹೊಸದೃಷ್ಟಿಕೋನವಾದ ಆನ್‍ಲೈನ್ ಮೀಡಿಯಂಗೆ ಹೊಂದಿಸಿಕೊಳ್ಳಲು ಪ್ರಯತ್ನಿಸಿದೆವು.

ಚದುರಿ ಹೋಗಬಹುದೆಂಬ ಭಯವೋ ಅಥವಾ ಹೊಸ ಮಾಧ್ಯಮದ ಪ್ರಯತ್ನದ ಬಯಕೆಯೋ ಸಂಚಯದ ಸದಸ್ಯರು ಪ್ರತಿ ವಾರ ಝೂಮ್ ಮೀಟಿಂಗ್‍ಗಳ ಮೂಲಕ ಹಲವು ರಂಗಚಟುವಟಿಕೆಗಳಲ್ಲಿ ತೊಡಗಿದೆವು. ಇದು ಖಂಡಿತವಾಗಿಯೂ ನಮ್ಮೆಲ್ಲರ ಆತ್ಮಸ್ಥೈರ್ಯ ಹಾಗೂ ಮನೋವಿಕಾಸಕ್ಕೆ ಸಹಾಯವಾಗಿತ್ತು. ಈ ಎಲ್ಲ ಕಾರ್ಯಗಳನ್ನು ಮಾಡುತ್ತಿದ್ದರೂ ಸಂಚಯ ಒಂದು ಸಮಾಜಮುಖಿಯಾದ ತಂಡ ಹಾಗೂ ಪಿಡುಗಿನ ಈ ಕಾಲದಲ್ಲಿ ನಾವು ಮತ್ತೂ ನಾವು ಯಾವುದಾದರೂ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕೆಂಬುದು ನಮ್ಮಲ್ಲಿ ಬಹುತೇಕರ ಆಶಯವಾಗಿತ್ತು.

ಲಾಕ್‍ಡೌನ್‍ನಿಂದ ಹಲವು ಕಲಾವಿದರು ಸಂಕಷ್ಟದಲ್ಲಿದ್ದುದರ ಮಾಹಿತಿ ಆಗಿಂದಾಗ್ಗೆ ಕೇಳಿ ಬರುತ್ತಿತ್ತು. ಹಲವು ಸಂಘಟನೆಗಳು ಇಂತಹ ಕಲಾವಿದರಿಗೆ ಸಹಾಯ ಮಾಡುವ ಪ್ರಯತ್ನದಲ್ಲಿದ್ದರೂ ಸಂಚಯ ಕೂಡಾ ಈ ಕೆಲಸದಲ್ಲಿ ಭಾಗಿಯಾಗಬೇಕೆಂಬ ಆಲೋಚನೆ ನಮ್ಮಲ್ಲೂ ಮೂಡಿತು. ಮೊದಲ ಹೆಜ್ಜೆಯಾಗಿ ಸಂಚಯದ ಸದಸ್ಯರು ತಮ್ಮ ವೈಯಕ್ತಿಕ ಉಳಿತಾಯದಿಂದ ಒಂದು ಲಕ್ಷದ ಒಂಬತ್ತು ಸಾವಿರ ರೂಪಾಯಿಗಳನ್ನು ಸಂಗ್ರಹಿಸಿ ಮೂವತೈದು ಕಲಾವಿದರಿಗೆ ಮೂರು ಸಾವಿರ ರೂಪಾಯಿಗಳಂತೆ ತಲುಪಿಸಿದೆವು. ನಮ್ಮ ಒಂದು ಸಣ್ಣ ಲೆಕ್ಕಾಚಾರದ ಪ್ರಕಾರ ತಿಂಗಳ ದಿನಸಿಗೆ ಎರಡು ಸಾವಿರದ ನಾನೂರು ರೂಪಾಯಿ ಹಾಗೂ ಔಷಧಗಳಿಗೆ ಆರು ನೂರು ರೂಪಾಯಿಯ ವೆಚ್ಚ ತಗಲಬಹುದೆಂದು ನಾವು ಈ ಮೊತ್ತ ನಿರ್ಧರಿಸಿದೆವು.

ಮಾಡಿದ ಈ ಕೆಲಸ ನಮಗೆ ತೃಪ್ತಿ ನೀಡಿದರೂ ಇದು ಸಾಲದು, ಇನ್ನೂ ಹೆಚ್ಚಿನ ಕೆಲಸ ಮಾಡಬಹುದು ಎಂದೆನಿಸುತ್ತಿದ್ದರೂ ವೈಯಕ್ತಿಕವಾಗಿ ನಮ್ಮ ಕೈಗಳು ಬಿಗಿದಿತ್ತು. ಇದೆಲ್ಲಾ ನಡೆದದ್ದು ಆಗಸ್ಟ್ ತಿಂಗಳಿನಲ್ಲಿ. ಆಗ ಈ ಲಾಕ್‍ಡೌನ್ ಕೂಡ ಹಂತ ಹಂತವಾಗಿ ತೆರೆದುಕೊಳ್ಳುತ್ತಿತ್ತು. ಸಮಾಜ ನಿಧಾನವಾಗಿ ತನ್ನ ಸಹಜಸ್ಥಿತಿಗೆ ಮರಳುವ ಪ್ರಯತ್ನದಲ್ಲಿತ್ತು. ಹೊಸ ದಿನಚರಿ, ಹೊಸ ರೀತಿಯ ಕೆಲಸ ಮಾಡುವ ವಿಧಾನಗಳಿಗೆ ನಾವು ಒಗ್ಗಿಕೊಳ್ಳಲು ಪ್ರಯತ್ನಿಸುತ್ತಿದ್ದೆವು. ಮೂರು ತಿಂಗಳ ನಂತರ ನಮ್ಮ ವೃತ್ತಿಯೂ ಪುನರಾರಂಭವಾಗಿದ್ದರಿಂದ ನಾವೂ ಚೇತರಿಸಿಕೊಂಡೆವು. ನಾವು ಆ ಕಾಲದ ಸುದೈವಿಗಳು. ಆದರೆ ಹಲವರಿಗೆ ಇದು ಸಾಧ್ಯವಾಗಿರಲಿಲ್ಲ. ಅತಿ ಹೆಚ್ಚು ಸಂಕಷ್ಟದಲ್ಲಿದ್ದವರು ಕಲಾವಿದರೆ. ಚಲನಚಿತ್ರ ಹಾಗೂ ಕಿರುತೆರೆ ಕಲಾವಿದರಿಗೆ ತಮ್ಮ ವೃತ್ತಿ ಬದುಕಿನ ಚಟುವಟಿಕೆಗಳು ಹೊಸ ವ್ಯವಸ್ಥೆಯಲ್ಲಿ ಆರಂಭವಾದವು.

ಆದರೆ ಸರ್ಕಾರ ಪ್ರದರ್ಶನ ಕೇಂದ್ರಗಳನ್ನು ಇನ್ನೂ ನಿರ್ಭಂಧಿಸಿದ್ದರಿಂದ ರಂಗಭೂಮಿ ಕಲಾವಿದರ ಸಂಕಷ್ಟ ಬೆಳೆಯುತ್ತಲೇ ಇತ್ತು. ರಂಗಭೂಮಿಯನ್ನೇ ವೃತ್ತಿ ಮತ್ತು ಜೀವನದ ಆಸರೆ ಎಂದು ಬದುಕಿದ್ದ ಕಲಾವಿದರು ತಮ್ಮ ಸುತ್ತಲಿನ ಬಹುತೇಕ ಚಟುವಟಿಕೆಗಳು ಸಹಜ ಸ್ಥಿತಿಗೆ ಮರಳುವುದನ್ನು ಕಂಡರೂ ತಮ್ಮ ವೃತ್ತಿಯ ಪುನರಾರಂಭದ ಬಗ್ಗೆ ಗೊಂದಲ ಹಾಗೂ ವೈಯಕ್ತಿಕ ಕಷ್ಟಗಳಿಂದ ಕಂಗೆಟ್ಟಿದ್ದರು. ಇವರ ಈ ಸ್ಥಿತಿಯ ಅರಿವಿದ್ದರೂ ನಾವುಗಳೂ ಕೂಡ ಏನೂ ಮಾಡದ ಸ್ಥಿತಿಯಲ್ಲಿದ್ದೆವು. ರಂಗಭೂಮಿಯನ್ನೇ ವೃತ್ತಿಯನ್ನಾಗಿಸಿಕೊಂಡ ಕಲಾವಿದರ ನೆರವಿಗೆ ನಾವೇಕೆ ಈ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಮಾಡಬಾರದು ಎಂದು ಸಂಚಯದ ಸದಸ್ಯ ಶ್ರೀರಂಗಭಟ್ಟ ಕೆಲವು ಯೋಜನೆಗಳನ್ನು ನಮ್ಮ ಪ್ರತಿವಾರದ ಝೂಮ್ ಮೀಟಿಂಗ್‍ನಲ್ಲಿ ಹೇಳಿದರು.

'ರಂಗಭೂಮಿಯೇ ನಮ್ಮ ಧ್ವನಿ' ಎಂಬ ನಿಲುವಿಗೆ ನಮ್ಮಲ್ಲಿ ಮತ್ತೆ ಹೊಸ ಕಾರ್ಯಕ್ರಮ ಚಿಗುರೊಡೆಯಿತು. ಕೇವಲ ದೇಣಿಗೆ ಸಂಗ್ರಹಿಸುವ ಕೆಲಸವನ್ನು ಹಲವರು ಮಾಡುತ್ತಿದ್ದರು. ನಾವು ಆ ನಿಟ್ಟಿನಲ್ಲಿ ಯೋಚಿಸಿಯೂ ಇರಲಿಲ್ಲ. ಹಾಗಾದರೆ ಹೇಗೆ? ಏನು? ಎಂಬ ಪ್ರಶ್ನೆಗಳಿಗೆ ನಮ್ಮಲ್ಲೆ ಮೂಡಿದ ಕಲ್ಪನೆಯಿಂದ ಕಾರ್ಯಕ್ರಮ ರೂಪುಗೊಳ್ಳತೊಡಗಿತು. ನಮಗೆ ಗೊತ್ತಿರೋದು ನಾಟಕ ಮಾಡೋದು ನಾವು ನಮ್ಮ ನಾಟಕಗಳ ಪ್ರದರ್ಶನದಿಂದಲೇ ದೇಣಿಗೆ ಸಂಗ್ರಹಿಸುವುದು ಸೂಕ್ತ ಎಂದೆನಿಸಿತು. ಆದರೆ ರಂಗಮಂದಿರಗಳೇ ಮುಚ್ಚಿರುವಾಗ ಪ್ರದರ್ಶನ ಹೇಗೆ ಸಾಧ್ಯ ? ಪ್ರೇಕ್ಷಕರೆಲ್ಲಿ ? ಎನ್ನುವ ಬಹುದೊಡ್ಡ ಸವಾಲು ನಮ್ಮೆದುರಿಗಿತ್ತು. ಪ್ರೇಕ್ಷಕನ ಮನೆಗೇ ನಾವು ನೇರವಾಗಿ ಪ್ರವೇಶಿಸಬಹುದಾದ ಇಂಟರ್‍ನೆಟ್ ಹಾಗೂ ಆನ್‍ಲೈನ್ ಎನ್ನುವ ಮಾಧ್ಯಮಕ್ಕೆ ನಮ್ಮ ರಂಗಚಟುವಟಿಕೆಗಳನ್ನು ಒಯ್ಯುವ ಮಾರ್ಗ ಕಾಣಿಸಿತು. ಇದು ಹೇಗಿದ್ದರೂ ಇಂದಿನ ಕಾಲದ ಬಹು ಉಪಯುಕ್ತ ಮಾರ್ಗವೂ ಕೂಡ. ಆದರೆ ಸದಾ ಪ್ರೇಕ್ಷಕರೊಂದಿಗಿನ ನೇರ ಸಂಬಂಧವನ್ನು ಇಲ್ಲಿ ಕಳೆದುಕೊಳ್ಳಬಹುದೆಂಬ ಆತಂಕದ ಜೊತೆಗೆ ಇತರ ಹಲವು ಅನುಕೂಲಗಳೂ ಅನಾನುಕೂಲಗಳ ಜಿಜ್ಞಾಸೆ ನಮ್ಮಲ್ಲಿ ಒಂದು ಆರೋಗ್ಯಕರ ಚರ್ಚೆಗೂ ವೇದಿಕೆಯಾಯಿತು. ಆದರೂ ನಮ್ಮ ಕಾರ್ಯಕ್ರಮಗಳ ಸಲುವಾಗಿ ಈ ಮಾರ್ಗವನ್ನು ತಾತ್ಕಾಲಿಕವಾಗಿ ಬಳಸೋಣ ಎಂಬ ನಿರ್ಧಾರವನ್ನು ಮಾಡಿದೆವು. ಮೂಲ ಕಾರ್ಯಕ್ರಮದ ರೂಪುರೇಷೆಯಲ್ಲಿ ನಾವು ಆನ್‍ಲೈನ್‍ನಲ್ಲಿಯೇ ನೇರ ಪ್ರಸಾರವಾಗುವಂತೆ ಎಂಟರಿಂದ ಹತ್ತು ನಾಟಕಗಳ ಪ್ರದರ್ಶನ, ಕೆಲವು ಸಂಗೀತ ಕಾರ್ಯಕ್ರಮಗಳನ್ನು ಹಾಗೂ ಪ್ರಖ್ಯಾತ ರಂಗಕರ್ಮಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನೂ ರೂಪಿಸಿ ಇದನ್ನು ಸುಮಾರು ಎರಡು - ಮೂರು ತಿಂಗಳುಗಳ ಕಾಲ, ವಾರಕ್ಕೆ ಮೂರು ನೇರ ಪ್ರಸಾರಗಳಂತೆ ಜಗತ್ತಿನ ಎಲ್ಲ ಭಾಗದಲ್ಲಿ ನೆಲೆಸಿರುವ ಕನ್ನಡಿಗರು ನೋಡುವ ಹಾಗೆ ಉಚಿತವಾಗಿ ಬಿತ್ತರಿಸಿ ಅವರಿಗೆ ನಮ್ಮ ಕಾರ್ಯಕ್ರಮ ಇಷ್ಟವಾದಲ್ಲಿ ಅವರ ಶಕ್ತ್ಯಾನುಸಾರ ದೇಣಿಗೆ ನೀಡುಬಹುದು ಎಂದು ಯೋಚಿಸಿದೆವು. ಈ ಕಾರ್ಯಕ್ರಮಕ್ಕೆ ‘ಸಂಚಯ ಕೇರ್ಸ್' ಎಂಬ ನಾಮಕರಣವನ್ನೂ ಮಾಡಿದೆವು.

ಕಾರ್ಯಕ್ರಮಗಳ ರೂಪುರೇಷೆ ಸಿದ್ದಪಡಿಸುವಾಗ ಇದರಲ್ಲಿ ಹಲವು ಸಮಸ್ಯೆಗಳು ಎದುರಾದವು. ಕಡೆಗೆ ನಾವು ಐದು ನಾಟಕಗಳನ್ನು ಚಿತ್ರಿಸಿ, ಅವನ್ನು ಯಾವುದಾದರೂ ಜಾಲತಾಣದಲ್ಲಿ ನಿರ್ದಿಷ್ಟ ಸಮಯದಲ್ಲಿ ಬಿತ್ತರಿಸುವ ಮಾರ್ಗವನ್ನು ಆಯ್ದುಕೊಂಡೆವು. ನಮ್ಮೊಡನೆ ಈ ಯೋಜನೆಗೆ ಸಹಕರಿಸುವಂತೆ ಕೋರಿದಾಗ ಸಮಷ್ಠಿ, ಪ್ರಕಸಂ, ಮತ್ತು ವಟೀಕುಟೀರ ತಂಡಗಳು ತಮ್ಮ ತಂಡದ ಪ್ರಖ್ಯಾತ ನಾಟಕಗಳನ್ನು ನೀಡುವುದರೊಂದಿಗೆ ನಮ್ಮೊಡನೆ ಕೈ ಜೋಡಿಸಿದರು. ಸಮಷ್ಠಿ ತಂಡದ ನೀರು ಕುಡಿಸಿದ ನೀರೆಯರು, ಪ್ರಕಸಂ ತಂಡದ ಅಮ್ಮಾವ್ರ ಗಂಡ, ಮತ್ತು ವಟೀ ಕುಟೀರದ ಶ್ರದ್ಧಾ ಮತ್ತು ಸ್ಟೇನ್‍ಲೆಸ್ಸ್ಟೀಲ್‍ ಪಾತ್ರೆಗಳು ನಾಟಕಗಳಾದ ಸಂಚಯದ ಟೆಂಪೆಸ್ಟ್, ತದ್ರೂಪಿ ಈ ನಾಟಕೋತ್ಸವದ ಐದು ನಾಟಕಗಳಾಗಿ ಆಯ್ಕೆಯಾದವು. ಇನ್ನೂ ಹಲವು ತಂಡಗಳು ಇದರಲ್ಲಿ ಆಸಕ್ತರಾಗಿದ್ದರೂ ಆ ಕಾಲದಲ್ಲಿ ತಮ್ಮ ತಂಡದ ಕಲಾವಿದರು ತಮ್ಮ ತಮ್ಮ ಊರುಗಳಲ್ಲಿ ಸಿಲುಕಿದ್ದರಿಂದ ಅವರುಗಳಿಗೆ ಈ ಸಮಯದಲ್ಲಿ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ.

ಮುಂದಿನ ಮುಖ್ಯ ಘಟ್ಟ ರಂಗಮಂದಿರ ಮತ್ತು ನಾಟಕದ ಚಿತ್ರೀಕರಣ - ರಂಗಮಂದಿರಕ್ಕೆ ನಾವು ಶಂಕರ ಫೌಂಡೇಶನ್‍ನ ಮುಖ್ಯಸ್ಥೆ ಶ್ರೀಮತಿ ರಶ್ಮಿ ಹೆಗಡೆ ಅವರನ್ನು ಭೇಟಿಯಾದೆವು. ಅವರು ನೂತನವಾಗಿ ನಿರ್ಮಿಸಿರುವ ಡಮರು ರಂಗಮಂದಿರವನ್ನು ಕಡಿಮೆ ಬಾಡಿಗೆಯಲ್ಲಿ ನಮಗೆ ನೀಡುವಂತೆ ಕೇಳುವ ಮನವಿ ನಮ್ಮಲ್ಲಿತ್ತು. ಆದರೆ ನಮ್ಮ ಕಾರ್ಯಕ್ರಮದ ವಿವರ ತಿಳಿದ ನಂತರ ಅವರು ತಮ್ಮ ರಂಗಮಂದಿರವನ್ನು ನಮ್ಮ ಐದು ನಾಟಕಗಳ ಚಿತ್ರೀಕರಣ ಮಾಡಲು ನಮ್ಮಿಂದ ಯಾವುದೇ ಹಣದ ನಿರೀಕ್ಷೆ ಮಾಡದೇ ಉಚಿತವಾಗಿ ನೀಡಿದರು.

ಸಂಚಯ ಕೇರ್ಸ್ ಕಾರ್ಯಕ್ರಮದುದ್ದಕ್ಕೂ ನಾವು ನಿರೀಕ್ಷಿಸದ ರೀತಿಯಲ್ಲಿ ಇನ್ನೂ ಹಲವರು ನಮಗೆ ಸಹಕರಿಸಿದರು. ಚಿತ್ರೀಕರಣಕ್ಕೆ ಬೇಕಾದ ಕ್ಯಾಮೆರಾಗಳು, ಇತರ ತಾಂತ್ರಿಕ ಸಲಕರಣೆಗಳು ಇದರ ಸಂಪೂರ್ಣ ಜವಾಬ್ದಾರಿಯನ್ನು ನಮ್ಮ ರಂಗ ಗೆಳೆಯ ಹಾಗೂ ಸಿನೆಮಾ ತಂತ್ರಜ್ಞ ಪರಮೇಶ್ ನಿಭಾಯಿಸಿದರು. ಅವರೊಂದಿಗೆ ಕ್ಯಾಮೆರಾ ಟೆಕ್ನಿಕ್ಸ್ ಸಂಸ್ಥೆಯ ಶ್ರೀಯುತ ಮಂಜುನಾಥ್ ಕೇವಲ ಸಲಕರಣೆಗಳ ಖರ್ಚನ್ನು ವಹಿಸಿ ತಮ್ಮ ತಂಡದ ಪೂರ್ಣ ಕೆಲಸದ ವೆಚ್ಚವನ್ನು ಭರಿಸಿ, ನಮ್ಮ ಉದ್ದೇಶವನ್ನರಿತು ಉಚಿತವಾಗಿ ಮಾಡಿಕೊಟ್ಟರು. ಇದರಿಂದ ನಮಗಾದ ಲಾಭ , ಶ್ರೀಯುತ ಮಂಜುನಾಥ್ ಅವರೊಂದಿಗಿನ ಸಖ್ಯ ಹಾಗೂ ಸಂಚಯಕ್ಕೆ ಅವರೊಂದಿಗೆ ಎಂದಿಗೂ ಉಳಿಯುವ ಬಾಂಧವ್ಯ. ಅವರ ವಿಶೇಷ ಕಾಳಜೀ , ಆಸ್ಥೆಯಿಂದ ನಮ್ಮೆಲ್ಲಾ ನಾಟಕಗಳು ಬಹಳ ಅಚ್ಚುಕಟ್ಟಾಗಿ ಚಿತ್ರೀಕರಣಗೊಂಡು ಅದರ ನಂತರದ ತಾಂತ್ರಿಕ ಕೆಲಸಗಳಾದ ಎಡಿಟಿಂಗ್ , ಮಿಕ್ಸಿಂಗ್‍ಗಳನ್ನು ಮಾಡಿಸಿದರು. ಈಗ ಸಿದ್ದವಿರುವ ನಮ್ಮೆಲ್ಲಾ ನಾಟಕಗಳೇ ಇದಕ್ಕೆ ಸಾಕ್ಷಿ.

ರಂಗಭೂಮಿಯಲ್ಲಿ ನಮ್ಮ ಹಲವು ವರ್ಷಗಳ ಗೆಳೆಯ ಶ್ರೀಯುತ ಕುಮಾರಸ್ವಾಮಿ ನಮ್ಮ ನಾಟಕಕ್ಕೆ ಬೇಕಾದ ಎಲ್ಲ ಬೆಳಕು ಮತ್ತು ಧ್ವನಿಗಳ ವ್ಯವಸ್ಥೆಯನ್ನು ಅತ್ಯಂತ ಕಡಿಮೆ ದರದಲ್ಲಿ ನೀಡುವುದರ ಜೊತೆಗೆ ಅಷ್ಟೂ ಚಿತ್ರೀಕರಣಗಳ ಜೊತೆಗೆ ನಮ್ಮೊಂದಿಗೆ ಹೆಗಲು ಕೊಟ್ಟು ದುಡಿದರು. ಇದರೊಂದಿಗೆ ತಾಂತ್ರಿಕ ಕೆಲಸಗಳೆಲ್ಲವೂ ಏರ್ಪಾಡಾದವು. ಶ್ರೀತಲ್‍ರಾಮ್ ನಮ್ಮ ಎಲ್ಲ ಚಿತ್ರೀಕರಣ ದಿನದ ಊಟೋಪಚಾರಗಳನ್ನು ವ್ಯವಸ್ಥಿತವಾಗಿ ಮಾಡಿಕೊಟ್ಟರು. ಡಮರು ರಂಗ ಮಂದಿರ ನಮಗೆ ಒಂದು ದಿನಕ್ಕೆ ಮಾತ್ರ ಕಾರ್ಯಕ್ರಮಕ್ಕೆ ಸಿಗಲಿಲ್ಲ. ಅಂದು ನಾವು ಕೆ.ಹೆಚ್. ಕಲಾಸೌಧವನ್ನು ಸಂಪರ್ಕಿಸಿದಾಗ ಅಲ್ಲಿನ ಮುಖ್ಯಸ್ಥೆ ವರ್ಷಿಣಿ ಮತ್ತು ಅವರ ತಂಡ ನಮಗೆ ನೆರವು ನೀಡಿದರು. ಅಲ್ಲಿ ಚಿತ್ರೀಕರಣಗೊಂಡ ನಾಟಕ ಸಮಷ್ಠಿ ತಂಡದ ನೀರು ಕುಡಿಸಿದ ನೀರೆಯರು.

ನಾಟಕಗಳ ಚಿತ್ರೀಕರಣಗಳ ನಂತರ ಮುಂದಿನ ಘಟ್ಟ ಅದನ್ನು ಜಾಲತಾಣದಲ್ಲಿ ಬಿಡುಗಡೆ ಮಾಡುವುದು. ನಮ್ಮ ಮೂಲ ಯೋಜನೆಯ ಪ್ರಕಾರ ನಾವು ಈ ನಾಟಕಗಳನ್ನು ಫ್ರೀ ಟು ವ್ಯೂ ಮಾದರಿಯಲ್ಲಿ ಅಂದರೆ ಜಗತ್ತಿನೆಲ್ಲೆಡೆ ಇರುವ ಪ್ರೇಕ್ಷಕರು ಉಚಿತವಾಗಿ ನೋಡಿ ಅವರಿಗೆ ಈ ಕಾರ್ಯಕ್ರಮ ಇಷ್ಟವಾದಲ್ಲಿ ನಮಗೆ ದೇಣಿಗೆಯನ್ನು ನೀಡಬಹುದು ಹಾಗೂ ಇದರಿಂದ ಬಂದ ಸಂಪನ್ಮೂಲದಲ್ಲಿ ಸುಮಾರು ಮುನ್ನೂರು ಕಲಾವಿದರಿಗೆ ಆರು ತಿಂಗಳ ಕಾಲ ಸ್ಟೇಫಂಡ್ ನೀಡುವುದು. ಆದರೆ ಇದಕ್ಕೊಂದು ಕಾನೂನಿನ ತೊಡಕು ಎದುರುಗೊಂಡಿತು. ಯಾವುದೇ ವಿದೇಶಿ ಮೂಲದಿಂದ ಯಾವುದೇ ದೇಣಿಗೆ ಸ್ವೀಕರಿಸಲು ಎಫ್.ಸಿ.ಆರ್.ಎ ಎಂಬ ಲೈಸೆನ್ಸ್ ಬೇಕಿತ್ತು. ಇದರ ಬಗ್ಗೆ ನಮಗೆ ಖಚಿತ ಮಾಹಿತಿಯ ಕೊರತೆಗಾಗಿ ನಮ್ಮ ಇಡೀ ಕಾರ್ಯಕ್ರಮ ನಮ್ಮ ಚಿತ್ರೀಕರಣದ ನಂತರ ಸ್ತಬ್ಧಗೊಂಡಿತು. ನಾವೆಲ್ಲರೂ ಗೊಂದಲಕ್ಕೀಡಾದೆವು. ಇದನ್ನು ದಾಟುವುದು ಕಷ್ಟವೆಂದೇ ಭಾವಿಸಿದೆವು. ಜಾಲತಾಣದ ಮೂಲಕ ಜಗತ್ತಿನಾದ್ಯಂತ ಕನ್ನಡಿಗರನ್ನು ಸಂಪರ್ಕಿಸುವ ನಮ್ಮ ಆಸೆ ಇದರಿಂದ ಕಮರಿತು. ಹಾಗೂ ಕೇವಲ ಭಾರತದೊಳಗೆ ಕನ್ನಡ ನಾಟಕದ ಪ್ರದರ್ಶನದಿಂದ ಸಂಗ್ರಹಿಸಬಹುದಾದ ಮೊತ್ತದ ಬಗ್ಗೆಯೂ ಸಂಶಯ ಮೂಡಿತು. ಈ ಸಂಕಷ್ಟದಿಂದ ನಮ್ಮನ್ನು ಪಾರು ಮಾಡಿದ್ದು ಸಂಚಯದ ಹಲವು ವರ್ಷಗಳ ಗೆಳೆಯ , ರಂಗಕರ್ಮಿ ಹಾಗೂ ಪ್ರಖ್ಯಾತ ಚಲನಚಿತ್ರ ನಿರ್ದೇಶಕ ಪವನ್‍ಕುಮಾರ್. ಅವರೊಂದಿಗೆ ಚರ್ಚಿಸಿದಾಗ ದೊರೆತ ಮಾಹಿತಿಯೆಂದರೆ ವಿದೇಶದಿಂದ ದೇಣಿಗೆ ಸ್ವೀಕರಿಸಲು ಎಫ್.ಸಿ.ಆರ್.ಎ ಸರ್ಟಿಫಿಕೇಶನ್‍ನ ಅಗತ್ಯವಿದೆ. ಆದರೆ ಭಾರತದ ಮೂಲದಿಂದ ಯಾವುದೇ ಸಾಂಸ್ಕøತಿಕ ಕಾರ್ಯಕ್ರಮದ ಟಿಕೇಟ್ ಮಾರಾಟವನ್ನು ನಾವು ಮಾಡಬಹುದು. ಹಾಗೂ ಇದಕ್ಕೆ ಬೇಕಿರುವ ಎಲ್ಲ ತಂತ್ರಜ್ಞಾನ ಮತ್ತು ಪರವಾನಿಗೆ ಅವರ ಸಂಸ್ಥೆಯ ಜಾಲತಾಣ www.thefuc.in  ಗೆ ಇದೆ. ನಮ್ಮ ಎಲ್ಲ ನಾಟಕಗಳನ್ನು ಅವರ ಜಾಲತಾಣದಲ್ಲಿ ವೀಕ್ಷಿಸಲು ಬೇಕಾದ ತಂತ್ರಜ್ಞಾನವನ್ನು ಮಾತ್ರವಲ್ಲದೇ ಆ ಜಾಲತಾಣದಲ್ಲಿ ಥಿಯೇಟರ್ ಎಂಬ ಮತ್ತೊಂದು ಹೊಸ ಲಿಂಕ್ ಸ್ಥಾಪಿಸಿಕೊಟ್ಟರು. ಜಾಗತಿಕ ಕನ್ನಡಿಗರನ್ನು ಸಂಪರ್ಕಿಸಲು ಹಾಗೂ ಕಾರ್ಯಕ್ರಮಕ್ಕೆ ಅನುಕೂಲವಾಗುವಂತೆ ಜಗತ್ತಿನೆಲ್ಲೆಡೆ ಟಿಕೇಟ್ ಮಾರಾಟವಾಗುವಂತೆ ಸುಗಮವಾಗಿ ನಡೆಯುವಂತೆ ವ್ಯವಸ್ಥೆ ಮಾಡಿದರು. ಇದರಿಂದಾಗಿ ನಮ್ಮ ಕಾರ್ಯಕ್ರಮ ಸುಲಭವಾಗಿ , ಯಶಸ್ವಿಯಾಗಿ ನಡೆಯಲು ಎಲ್ಲಾ ಮಾರ್ಗಗಳು ಸಂಪೂರ್ಣವಾಗಿ ಸಿದ್ದವಾಗಿದ್ದವು.

ಬಹಳ ದೊಡ್ಡದಾಗಿ ರೂಪುಗೊಳ್ಳುತ್ತಿರುವ ಕಾರ್ಯಕ್ರಮವನ್ನು ನಾವು ನಿರ್ದಿಷ್ಟ ಪ್ರೇಕ್ಷಕ ವರ್ಗಕ್ಕೆ ತಲುಪಿಸಬೇಕಾದಾಗ ಈ ಕಾರ್ಯಕ್ರಮವನ್ನು ಧೃಢೀಕರಿಸುವವರ ಅಗತ್ಯ ನಮಗಿತ್ತು.  ಈ ಕಾಲದಲ್ಲಿ ಹಲವು ರೀತಿಯ ಸಹಾಯಕ ಕಾರ್ಯಕ್ರಮಗಳು ಜರುಗುತ್ತಿದ್ದವು. ಎಲ್ಲವೂ ಕೋವಿಡ್ ಮಾರಿಯಿಂದ ತತ್ತರಿಸಿದವರ ನೆರವಿನ ಕಾರ್ಯಕ್ರಮಗಳೇ. ನಮ್ಮ ವಿಶೇಷತೆ ನಮಗಷ್ಟೇ ಮುಖ್ಯವಾಗದೇ ಇರಬೇಕಾದರೆ ಗಣ್ಯ ಕಲಾವಿದರು ಪರವಾಗಿ ಮಾತನಾಡಿದರೆ ಸೂಕ್ತ ಎಂಬ ಅನಿಸಿಕೆ ನಮ್ಮಲ್ಲಿತ್ತು. ಅವರೆಲ್ಲರೂ ವಿಡಿಯೋ ಮುಖೇನ ತಮ್ಮ ಮನವಿ ಸಹಕಾರ ನೀಡಿದ್ದನ್ನು ನಾವು ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಿಸಿ ಕಾರ್ಯಕ್ರಮದ ಪ್ರಚಾರ ಮಾಡುವ ಉದ್ದೇಶ ನಮ್ಮದು. ಇದನ್ನು ನಾವು ನಮ್ಮ ಪರಿಚಯದ ಹಿರಿಯ , ಪ್ರಖ್ಯಾತ ಕಲಾವಿದರಲ್ಲಿ ಮನವಿ ಮಾಡಿದಾಗ ಒಂದಿಡೀ ಕಲಾ ಪ್ರಪಂಚವೇ ನಮ್ಮೊಟ್ಟಿಗೆ ನಿಂತಿತು. ಶ್ರೀಮತಿ ಅರುಂಧತಿ ನಾಗ್, ಚಿತ್ರನಟ ರಮೇಶ್ ಅರವಿಂದ್, ಹಿರಿಯ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್, ಕವಿ ಜಯಂತ ಕಾಯ್ಕಿಣಿ, ಸಾಹಿತಿಗಳಾದ ವಸುಧೇಂದ್ರ, ಹಿರಿಯ ನಟರಾದ ಅಚ್ಯುತ್ ಕುಮಾರ್, ಪ್ರಖ್ಯಾತ ನಟರಾದ ನೀನಾಸಂ ಸತೀಶ್, ರಾಷ್ಟ್ರಪತಿ ವಿಜೇತ ನಟ ಸಂಚಾರಿ ವಿಜಯ್, ರಾಷ್ಟ್ರಪತಿ ವಿಜೇತ ನಿರ್ದೇಶಕರಾದ ಬಿ.ಸುರೇಶ್ ಹಾಗೂ ಮಾಂಸೋರೆ, ಇವರಲ್ಲದೇ ಅಂತರರಾಷ್ಟ್ರೀಯ ಕ್ರಿಕೆಟಿಗರಾದ ವಿಜಯ್ ಭಾರಧ್ವಾಜ್, ಪ್ರಖ್ಯಾತ ಕನ್ನಡ ವೀಕ್ಷಕ ವರದಿಗಾರರಾದ ಶ್ರೀನಿವಾಸ್ ಮೂರ್ತಿ, ಇವರುಗಳೆಲ್ಲ ತಮ್ಮ ಒಂದು ನಿಮಿಷದ ವಿಡಿಯೋ ಮನವಿಯನ್ನು ಸಂಚಯದ ಪರವಾಗಿ ನಿಂತು ಮಾಡಿದರು. ಇದರಿಂದ ನಮ್ಮ ಉದ್ದೇಶದ ಧೃಢೀಕರಣ ಅತ್ಯಂತ ಯಶಸ್ವೀಯಾಗಿ ನೆರವೇರಿತು. ಜನರಲ್ಲಿ ಸಂಚಯ ಕೇರ್ಸ್ ಕಾರ್ಯಕ್ರಮದ ಬಗ್ಗೆ ಉತ್ತಮ ಅರಿವು ಮೂಡಿತು.

ಇನ್ನುಳಿದ ಪ್ರಮುಖ ಘಟ್ಟವೆಂದರೆ ಜನರು ನಮ್ಮ ಈ ಕಾರ್ಯಕ್ರಮಕ್ಕೆ ಸ್ಪಂದಿಸಿ ಹಣ ನೀಡುವುದು. ನಮ್ಮಲ್ಲಿ ಎರಡು ಮಾರ್ಗಳಿದ್ದವು. ಒಂದು - ಜನರು ನಾಟಕಗಳ ಟಿಕೇಟ್‍ಗಳನ್ನು ಖರೀದಿಸಿ ಜಾಲತಾಣದದಲ್ಲಿ ನಮ್ಮ ಐದು ನಾಟಕಗಳನ್ನು ನೋಡುವುದು.  ಎರಡು - ನಾವು ನಮ್ಮ ಪರಿಚೇತರ ಮೂಲಕ ಭಾರತೀಯರ ನೆಲೆಯಲ್ಲಿ ದೇಣಿಗೆ ಸಂಗ್ರಹಿಸುವುದು. ಈ ಕಾರ್ಯಕ್ರಮಕ್ಕೆ ನಮಗೆ ಬೆನ್ನೆಲುಬಾಗಿ ನಿಂತದ್ದು ಶ್ರೀ ಅಶೋಕ್ ರಾಮ್‍ಶೆಟ್ಟಿ. ಇವರು ನಮಗೆ ನಿಲೇಕಣಿ ಫೌಂಡೆಶನ್‍ನ ಅಧಿಕಾರಿಗಳನ್ನು ಪರಿಚಯಿಸಿದ್ದಲ್ಲದೇ ಅಲ್ಲಿಂದ ಒಂದು ಬೃಹತ್ ಸಂಪನ್ಮೂಲ ಬರುವಂತೆ ಮಾಡಿಕೊಟ್ಟರು. ಹಾಗೂ ಶ್ರೀ ರಾಜೇಶ್ಪಂ ಡಿತ್ ನಮಗೆ ಮೋಹನ್‍ದಾಸ್ ಪೈ ಅವರ ಸಂಪರ್ಕವನ್ನು ಸಾಧಿಸಿಕೊಟ್ಟದ್ದಲ್ಲದೆ  ಅಲ್ಲಿಂದಲೂ ಒಂದು ಉತ್ತಮ ಸಂಪನ್ಮೂಲ ಬರುವ ಹಾಗೆ ಮಾಡಿದರು. ಶ್ರೀ ಮೋಹನ್ ದಾಸ್ ಪೈ ಅವರ ಕಛೇರಿಯಿಂದ ಉತ್ತರ ಬಂದ ವೇಗ ಖಂಡಿತವಾಗಿಯೂ ನಮ್ಮಲ್ಲಿ ಮತ್ತಷ್ಟು ಹುರುಪು ತುಂಬಿದ್ದಲ್ಲಿ ಸಂಶಯವೇ ಇಲ್ಲ. ಅಮೇರಿಕಾದಲ್ಲಿ ನೆಲೆಸಿರುವ ಸಂಚಯದವರೇ ಆದ ಶ್ರೀಮತಿ ಅನಿತಾ ಕಾಮತ್, ತಮ್ಮ ಎಂದಿನ ಅಭ್ಯಾಸದಂತೆ ಸಂಚಯದ ಈ ಕಾರ್ಯಕ್ರಮಕ್ಕೂ ಬೆನ್ನೆಲುಬಾದರು. ಅವರು ಕಳೆದ ಇಪ್ಪತ್ತು ವರ್ಷಗಳಿಂದಲೂ ಹಲವು ಕಾರ್ಯಕ್ರಮಗಳಿಗೆ ಉದಾರ ರೀತಿಯಲ್ಲಿ ನೆರವಾಗಿದ್ದರು. ಇದೇ ಸಮಯದಲ್ಲಿ ಗೆಳೆಯರಾದ ಶ್ರೀ ಸಂಜಯ್ ಸಿಂಹ ಈ ಸಂದರ್ಭದಲ್ಲಿ ಕೋವಿಡ್‍ನಿಂದ ಬಳಲುವವರಿಗೆ ನೆರವಾಗುವ ಯೋಜನೆಯಲ್ಲಿದ್ದರು. ಸಂಚಯ ಕೇರ್ಸ್ ಕಾರ್ಯಕ್ರಮದ ಬಗ್ಗೆ ತಿಳಿದೊಡನೆ ಅವರೂ ನಮ್ಮನ್ನು ಬೆಂಬಲಿಸಿದರು.

ಇದಿಷ್ಟು ಒಂದು ಭಾಗದ ಕೆಲಸವಾದರೆ ಮತ್ತೊಂದೆಡೆ ಸೂಕ್ತ ಕಲಾವಿದರನ್ನು ಗುರುತಿಸಿಅವರುಗಳ ಬ್ಯಾಂಕ್ ಅಕೌಂಟ್ ಮಾಹಿತಿಯನ್ನು ಪಡೆಯುವುದು. ಗಣೇಶ್ ಶೆಣೈ ಈ ಜವಾಬ್ದಾರಿಯನ್ನು ಅತ್ಯಂತ ಸೂಕ್ಷ್ಮ ರೀತಿಯಲ್ಲಿ ನಿರ್ವಹಿಸಿದ್ದರು. ಇಲ್ಲಿ ಯಾರಿಗೂ ಸಂಕೋಚ, ಮುಜುಗರವಾಗಬಾರದು ಎಂಬುದು ನಮ್ಮೆಲ್ಲರ ಉದ್ದೇಶ. ಈ ರೀತಿಯಲ್ಲಿ ಸೂಕ್ತ ಕಲಾವಿದರ ಪಟ್ಟಿ ತಯಾರಿಸಲು ನೆರವಾಗಿದ್ದು ಶ್ರೀ ಪಿಚ್ಚಳ್ಳಿ ಶ್ರೀನಿವಾಸ್ , ಶ್ರೀ ರಾಮಕೃಷ್ಣ ಬೆಳ್ತೂರ್, ಶ್ರೀ ರೇವಣ್ಣ , ಶ್ರೀ ಜಿ.ಪಿ ಒ ಚಂದ್ರು , ಶ್ರೀ ರಾಜಣ್ಣ ಜೇವರ್ಗಿ, ಶ್ರೀ ಶಶಿಧರ್ ಭಾರಿಘಾಟ್, ಶ್ರೀ ಚಂದೋಡಿ ಬಂಗಾರೇಶ್, ಮತ್ತು ಶ್ರೀ ಸುಂದರೇಶ್ . ಸಿದ್ದವಾದ ಹೆಸರುಗಳ ಬ್ಯಾಂಕ್ ಅಕೌಂಟ್ ಮತ್ತಿತರ ಕನಿಷ್ಠ ವಿವರಗಳನ್ನು ಕ್ರೋಢೀಕರಿಸಲು ಸಹಾಯ ಮಾಡಿದವರು ಶ್ರೀ ಸಂದೀಪ್ ಪೈ. ವಿಶೇಷ ಆದ್ಯತೆಯಿಂದ ತಯಾರಾದ ಈ ಪಟ್ಟಿಯಲ್ಲಿದ್ದವರು ಮುಖ್ಯವಾಗಿ ಮಹಿಳಾ ಕಲಾವಿದರು. ಹಿರಿಯ ನಾಗರೀಕ ಕಲಾವಿದರು, ಮತ್ತು ಆರೋಗ್ಯ ಸಮಸ್ಯೆಯಿದ್ದ ಕಲಾವಿದರು.

ಕಟ್ಟಕಡೆಯ ಹಂತವಾಗಿ ನಾವು ಈ ಇನ್ನೂರ ಮೂವತೈದು ಕಲಾವಿದರುಗಳಿಗೆ ತಿಂಗಳಿಗೆ ಮೂರು ಸಾವಿರ ರೂಪಾಯಿಗಳಂತೆ ಮೂರು ತಿಂಗಳುಗಳ ಕಾಲ ಗೌರವಧನ ನೀಡಿದೆವು. ಇದೇ ಸಮಯದಲ್ಲಿ ಶಶಿಧರ್ ಭಾರಿಘಾಟ್ ಅವರಿಂದ ಪರಿಚಯಗೊಂಡ ಅಮೆರಿಕಾದ ಬಾಸ್ಟನ್‍ನ ರಂಗತರಂಗ ತಂಡದವರು ಜನವರಿ ಇಪ್ಪತ್ಮೂರರಂದು ಬಾಬು ಹಿರಣ್ಯಯ್ಯನವರ ಒಂದು ಕಾರ್ಯಕ್ರಮವನ್ನು ಆಯೋಜಿಸಿ ಅವರಲ್ಲಿ ಸಂಗ್ರಹವಾದ 2,164 ಯು ಸ್ ಡಾಲರ್‍ಗಳನ್ನು ಸಂಚಯ ಕೇರ್ಸ್ ಕಾರ್ಯಕ್ರಮಕ್ಕೆ ನೀಡಿದರು. ಶ್ರೀ ಮಧುಸೂದನ್ ಅವರು ಈ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಸಂಚಯ ಕೇರ್ಸ್ ಸಿಆರ್‍ಒ ಸರ್ಟಿಫಿಕೇಟ್ ಇಲ್ಲದ್ದರಿಂದ ಈ ಮೊತ್ತವನ್ನು ಅವರು ನಮಗೆ ರೋಟರಿ ಕ್ಲಬ್ ವೆಸ್ಟ್ ಮೂಲಕ ನಮಗೆ ಹಸ್ತಾಂತರಿಸಿದರು. ಈ ಮೊತ್ತವನ್ನು 196 ಕಲಾವಿದರಿಗೆ ಮೂರು ಸಾವಿರ ರೂಪಾಯಿಗಳಂತೆ ಅವರ ಖಾತೆಯಿಂದಲೇ ನೇರವಾಗಿ ವರ್ಗಾಯಿಸಲಾಯಿತು. 

ಬ್ಯಾಂಕಿಂಗ್‍ನಲ್ಲಿ ನಮಗೆ ನೆರವಾಗಿದ್ದು ಕೆನರಾ ಬ್ಯಾಂಕ್ ದೊಡ್ಡಬೆಲೆ ಶಾಖೆ /ಬ್ರ್ಯಾಂಚ್ ಇವರು ಈ ಎಲ್ಲಾ 235 ಖಾತೆಗಳಿಗೂ ಒಟ್ಟು ಸಂಗ್ರಹವಾದ ಮೊತ್ತವಾದ 27 ಲಕ್ಷವನ್ನು ಪ್ರತಿದಿನವೂ ಆನ್ ಲೈನ್ ಮೂಲಕ ಹಣ ಟ್ರಾನ್ಸ್‍ವರ್ ಮಾಡಿದ್ದಾರೆ. ಗೆಳೆಯರಾದ ಶ್ರೀಧರಮೂರ್ತಿ, ಸಂದೀಪ್ ಜೈನ್, ಭೂಪೇಶ್ ಬೆಳಗಲಿ, ಹಾಗೂ ಗೌರವ್ ಗೌಡ ನಮ್ಮ ಈ ಕಾರ್ಯಕ್ರಮಕ್ಕೆ ಹಲವು ರೀತಿಯಲ್ಲಿ ನೆರವು ನೀಡಿದರು.

ಪ್ರಚಾರಕ್ಕಾಗಿ ನಮಗೆ ನೆರವಾಗಿದ್ದು ನೀನಾಸಂ ಪದವೀಧರ ಹಾಗೂ ಚಿತ್ರ ನಿರ್ದೇಶಕ ರಾಘು ಶಿವಮೊಗ್ಗ. ಅಲ್ಲದೆ ಮಾಧ್ಯಮ ಮಿತ್ರರಾದ ವಿಜಯ ಕರ್ನಾಟಕದ ಶ್ರೀ ಹರೀಶ್, ಉದಯವಾಣಿ ಪತ್ರಿಕೆಯ ಶ್ರೀ ರವಿ, ಕನ್ನಡ ಪ್ರಭ ಪತ್ರಿಕೆಯ ಶ್ರೀ ಕೆಂಡಪ್ರವಿ, ಟೈಮ್ಸ್ ಆಫ್ ಇಂಡಿಯಾದ ಶ್ರೀದೇವಿ, ಇಂಡಿಯನ್ ಎಕ್ಸ್‍ಪ್ರೆಸ್ ನ ಮೋನಿಕಾ ಹಾಗೂ ಏಷಿಯಂಟ್ಸು ವರ್ಣಾದ ಯೆಮೆನ್ ಸೈಯದ್ ತಮ್ಮ ಪತ್ರಿಕೆಗಳಲ್ಲಿ ಇದನ್ನು ಸಂಚಯ ಕೇರ್ಸ್ ನ ಬಗ್ಗೆ ಬರೆಯುವ ಮೂಲಕ ನಮಗೆ ಉತ್ತಮ ರೀತಿಯ ಪ್ರಚಾರ ಮೆರೆಯುವಲ್ಲಿ ಸಹಕರಿಸಿದರು. 

ಕೋವಿಡ್ ಮಹಾಮಾರಿ ನಮ್ಮೆಲ್ಲರಿಗೂ ಹಲವು ರೀತಿಯ ಪಾಠ ಕಲಿಸಿದೆ. ಇದೆಲ್ಲದರ ನಡುವೆಯೂ ನಾವು ಹೊಸ ಹುರುಪಿನಿಂದ ಮತ್ತೆ ನಮ್ಮ ಎಂದಿನ ಲವಲವಿಕೆಯಿಂದ ಬದುಕಲು ಕಲಿಯಬೇಕು. ಸಂಚಯ ಕಳೆದ 33 ವರ್ಷಗಳಿಂದ ನಿರಂತರವಾಗಿ ರಂಗಭೂಮಿಯಲ್ಲಿ ತೊಡಗಿಕೊಂಡಿದೆ. ರಂಗಭೂಮಿಯಲ್ಲಿ ನಮಗೆ ಜಾತಿ, ಮತ, ಧಮಕ್ಕಿಂತಲೂ ಮಾನವೀಯತೆಯೇ ಮುಖ್ಯ. ಈ ನಿಟ್ಟಿನಲ್ಲಿ ಹಾಗೂ ನಂಬಿಕೆಯಲ್ಲಿ ರಂಗಭೂಮಿಯಲ್ಲಿ ತೊಡಗಿಕೊಂಡಿರುವ ನಮಗೆ ನೀವೆಲ್ಲರೂ ನೀಡಿರುವ ಸಹಾಯವೇ ಅತ್ಯಮೂಲ್ಯ ಮತ್ತು ಚಿರಸ್ಮರಣೀಯ. ಇದರಿಂದ ನಮಗೆ ಮತ್ತಷ್ಟು ಹುರುಪು , ಮತ್ತೆ ರಂಗಭೂಮಿಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದು ಸಾಧ್ಯವಾಗುವುದರಲ್ಲಿ ಸಂಶಯವೇ ಇಲ್ಲ. ಈ ಪ್ರಸ್ತಾವನೆಯೊಂದಿಗೆ ಇಂದಿಗೆ ಸಂಚಯ ಕೇರ್ಸ್ ಕಾರ್ಯಕ್ರಮವನ್ನು ಮುಕ್ತಾಯಗೊಳಿಸುತ್ತಿದ್ದೇವೆ. ಇದರಿಂದ ಗೌರವಧನ ಸ್ವೀಕರಿಸಿದ ಕಲಾವಿದರಿಗೆ ಕಿಂಚಿತ್ ನೆರವಾಗಿದ್ದಲ್ಲಿ ನಮಗದೇ ಸಾರ್ಥಕತೆ. ಅವರೆಲ್ಲರಿಗೂ ತಮ್ಮ ಮುಂದಿನ ಕಲಾಜೀವನಕ್ಕೆ ಶುಭಕೋರುತ್ತೇವೆ. ಈ ಇಡೀ ಕಾರ್ಯಕ್ರಮದ ಬಗ್ಗೆ ಯಾವುದೇ ಮಾಹಿತಿ ಬೇಕಿದ್ದಲ್ಲಿ ನೀವು ಸಂಚಯ ಟ್ರಸ್ಟ್ sanchayatrust@gmail.com ಗೆ ಮಿಂಚಂಚೆ ಕಳುಹಿಸಬಹುದು. ನಿಮ್ಮ ಯಾವುದೇ ಪ್ರಶ್ನೆ ಅಥವಾ ಸಂಶಯಗಳಿಗೆ ನಾವು ಸಂತೋಷದಿಂದ ಉತ್ತರಿಸುತ್ತೇವೆ.

ಇಂತಿ,

ಸಂಚಯ  

Comments

Popular posts from this blog

Prakasam Productions

  ಕಲಾ ಕೃಷಿ - Agriculture of Culture ಕಲಾ ಕೃಷಿ Kalaa Krushi, all the Performing Arts activities we do for Pradarshana Kalaa Samsthe (Prakasam).  This page is the index of all our endeavors.  We would appreciate your Feedback on our activities and request you to support our endeavors. Check out our dedicated & selfless team, our Team Activities & Join Hands with us for Kala Krushi.  If you are interested in joining us here is the WHATSAPP COMMUNITY LINK or mail us at prakasamtrust@gmail.com   Productions List: Home Theatre Toyota Road Awareness Program Jalpa Sanamathe Kathakhanda Sathya Nithya Isila Road awareness skit for Toyota   Varalakshmi Avaantara Caronammana Krupe Meenina Hejje Nivaarya Sahana Murthy Mahapeede Mahablu Masthi Kallu Namma Nimmolagobba Mr. Shambho Shiva Shankara Bhava Navanaveena Avalavanu Avanavalu Gulle Nari Ugalageete Bogie Katha Sangama Sairandhri Vaave Kattalu* Yaksha* Rayakota 1858* 13 Margosa Mahal Hosabelaku Doos...

Sridevi Mahatme

Sridevi Mahatme Kannada Comedy Play "Sridevi Mahathme" a short story by Vasudendhra, based out of an apartment complex in Bangalore. It addresses the issues of people and their perceptions of a simple incident and addresses them in a witty & comical way.  This holds the mirror to the current scenario of our lifestyle and living morals. CAST: Surabhi, Vijay, ChandraKeerthi. CREW: Stage design: Shashidhar Adappa Lights: Mustafa Music direction: Gajjanana.T.Naik DIRECTION: MANGALA.N Sridevi Mahatme Poster

Meghashree's Profile

Contact: 7259998222/333 or mail prakasamtrust@gmail.com Meghashree hails from a family of Legendary Theatre and Motion Picture Personalities. She possess Diploma in Fashion Technology from Rajiv Gandhi Memorial Polytechnic. Blessed as the Grand daughter of Sri. C. Honnappa Bhagavathar - a stalwart in the motion pictures of Kannada Cinema, who was also renowned as the '' Gaana Kala Bhushana '' in Tamil and Kannada. He is bestowed with the Karnataka Nataka Academy Awards, Gold medals for his extraordinary talent as a great musician and for his splendid style of  ''Harikatha''. His name is synonymously with the splendid folk art / music which is now moving into the oblivion. Professional Details : Theatre : Active member of Benaka and Pra.Ka.Sam theatre  troupes. Plays Performed are Gokula Nirgamana, Jokumaraswamy, Katthale Belaku, Hayavadhana, Hosabelaku, Katha Sangama, Chandrahasa, Kaakana Kote, Pramilarjuneeyam, Bogie...... T.V Serials...